ನವದೆಹಲಿ: ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸುವಂತೆ ಹಾಗೂ ಹೊಸ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಜನವರಿ 11 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ರೈತ ಮುಖಂಡರ ಏಳನೇ ಸುತ್ತಿನ ಸಭೆ ವಿಫಲವಾಗಿದ್ದು, ಯಾವುದೇ ಸಕಾರಾತ್ಮಕ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಮನವಿಗಳನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಬರುವ ದಿನಗಳಲ್ಲಿ ರೈತರು ಹಾಗೂ ಸರ್ಕಾರದ ಮಧ್ಯೆ ಸಕಾರಾತ್ಮಕ ಸಂಧಾನವಾಗುವ ನಿರೀಕ್ಷೆ ಇದೆ. ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣೆಗೆ ಬರುವ ಮುನ್ನವೇ ಈ ಬೆಳವಣಿಗೆಯಾಗಲಿದೆ ಎಂದು ಆಶಿಸುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.