ನವದೆಹಲಿ: ಸಲಿಂಗ ವಿವಾಹ ಕುರಿತ ವಿಚಾರಣೆಯನ್ನು ಜನವರಿ 6ರಂದು ಸುಪ್ರೀಂಕೋರ್ಟ್ ನಡೆಸಲಿದೆ. ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳ ವಿಚಾರಣೆಗಳನ್ನು ಕೈಗೆತ್ತಿಕೊಳ್ಳುವ ಕುರಿತ ಸಹ ವಿಚಾರಣೆ ನಡೆಸುವುದಾಗಿ ಸರ್ವೋಚ್ಛ ನ್ಯಾಯಾಲಯು ಮಂಗಳವಾರ ತಿಳಿಸಿವೆ.
ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠದ ಮುಂದೆ ವಕೀಲೆ ಮೇನಕಾ ಗುರುಸ್ವಾಮಿ ಮತ್ತು ವಕೀಲ ಕರುಣಾ ನಂದಿ ಈ ವಿಷಯವನ್ನು ಪ್ರಸ್ತಾಪಿಸಿದರು. ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಪ್ರತ್ಯೇಕ ವಿಚಾರಣೆಯು ಬಾಕಿ ಉಳಿದಿದ್ದು, ಜನವರಿ 6ರಂದು ವಿಚಾರಣೆ ನಿಗದಿಪಡಿಸಲಾಗಿದೆ. ಆದ್ದರಿಂದ ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳ ವರ್ಗಾವಣೆ ಅರ್ಜಿಗಳನ್ನು ಸಹ ಅಂದು ಪಟ್ಟಿ ಮಾಡಬಹುದು ಎಂದು ಕರುಣಾ ನಂದಿ ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನೂ ಓದಿ:ಸಲಿಂಗ ವಿವಾಹಕ್ಕೆ ಸಾಕ್ಷಿಯಾದ ಕೋಲ್ಕತ್ತಾ.. ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಪುರುಷರು!
ದೆಹಲಿ ಮತ್ತು ಕೇರಳದ ವಿವಿಧ ಹೈಕೋರ್ಟ್‌ಗಳಲ್ಲಿ ಇದೇ ರೀತಿಯ ಅರ್ಜಿಗಳು ಬಾಕಿ ಉಳಿದಿವೆ. ಹೀಗಾಗಿಯೇ ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಬಹುದು ಎಂದು ಹೇಳಿದರು. ಇದಕ್ಕೆ ಸಿಜೆಐ ಒಪ್ಪಿಗೆ ಸೂಚಿಸಿ, ಜನವರಿ 6ರಂದು ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಪಟ್ಟಿ ಮಾಡಿದರು. ಸಲಿಂಗ ವಿವಾಹಕ್ಕೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ಈ ಹಿಂದೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಸಲಿಂಗ ಮದುವೆಗೆ ಒತ್ತಾಯಿಸಿದ ಅರ್ಜಿಗಳು: ಕಳೆದ 10 ವರ್ಷಗಳಿಂದ ಒಟ್ಟಿಗೆ ಇರುವ ಜೋಡಿ ಈ ತಮ್ಮ ಸಂಬಂಧವನ್ನು ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಎಂದು ಘೋಷಿಸಬೇಕೆಂದು ಮನವಿ ಮಾಡಿದೆ. ನಮ್ಮ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಒಟ್ಟಾಗಿ ಸೇರಿ ಕಾರ್ಯಕ್ರಮ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಜೋಡಿ ತಮ್ಮ ಅರ್ಜಿಯಲ್ಲಿ ತಿಳಿಸಿದೆ.