ನವದೆಹಲಿ:ಮೋದಿ ಸರ್ಕಾರವು ರಾಜಕೀಯ ಪಿತೂರಿಯ ಭಾಗವಾಗಿ ಸಿಬಿಐ ಮತ್ತು ಇಡಿಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಕಾಂಗ್ರೆಸ್ ನೇತೃತ್ವದಲ್ಲಿ 14 ಪಕ್ಷಗಳು ಶುಕ್ರವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಈ ಅರ್ಜಿ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಏಪ್ರಿಲ್ 5ರಂದು ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ದಂತಹ ತನಿಖಾ ಸಂಸ್ಥೆಗಳು ಬಿಜೆಪಿ ವಿರೋಧಿಗಳನ್ನು ಮಾತ್ರ ಗುರಿಯಾಗಿಸುತ್ತಿವೆ ಎಂದು ಅರ್ಜಿಯಲ್ಲಿ ಪ್ರತಿಪಕ್ಷಗಳು ಆರೋಪಿಸಿವೆ. ಸಿಬಿಐ, ಇಡಿ ಪ್ರಕರಣಗಳನ್ನು ಎದುರಿಸುತ್ತಿರುವ ನಾಯಕರು ಬಿಜೆಪಿ ಸೇರಿದರೆ ಅವರ ಮೇಲಿನ ಪ್ರಕರಣಗಳು ಕೊನೆಗೊಳ್ಳುತ್ತವೆ ಎಂದು ಉಲ್ಲೇಖಿಸಿದ್ದಾರೆ. ಶೇ 95ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ವಿರುದ್ಧವೇ ಇವೆ. ಬಂಧನದ ಮೊದಲು ಮತ್ತು ನಂತರ ತನಿಖಾ ಸಂಸ್ಥೆಗಳು ಅನುಸರಿಸಿದ ಮಾರ್ಗಸೂಚಿಗಳೇನು ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು. 14 ಕಕ್ಷಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್‌ಗೆ ಹಾಜರಾಗಿದ್ದರು. ನ್ಯಾಯಾಲಯದಲ್ಲಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಬಂಧನ ಮತ್ತು ಜಾಮೀನಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸಿಬಿಐ, ಇಡಿ ಮುಂತಾದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಸಂಸ್ಥೆಗಳ ಮೂಲಕ ಸರ್ಕಾರ ಪ್ರತಿಪಕ್ಷಗಳ ನಾಯಕರು ಹಾಗೂ ಅವರ ಜತೆ ಸಂಬಂಧ ಹೊಂದಿರುವವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಏಜೆನ್ಸಿಗಳು ಕೇವಲ ಕ್ರಮದ ಹೆಸರಿನಲ್ಲಿ ಪ್ರತಿಪಕ್ಷಗಳ ನಾಯಕರನ್ನು ನಿರಂತರವಾಗಿ ಗುರಿಯಾಗಿಸುತ್ತಿವೆ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ದೂರಿದರು. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ನಂತರ ಹಲವು ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದರು.
ಈ ಪತ್ರದಲ್ಲಿ ಏಜೆನ್ಸಿಗಳ ದುರ್ಬಳಕೆ ನಿಲ್ಲಿಸುವಂತೆ ಒತ್ತಾಯಿಸಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸೇರಿದಂತೆ ಒಂಬತ್ತು ವಿರೋಧ ಪಕ್ಷದ ನಾಯಕರು ಸಹಿ ಹಾಕಿದ್ದರು. ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ, ನಿರಂಕುಶ ಆಡಳಿತದಲ್ಲಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜನತಾ ದಳ ಯುನೈಟೆಡ್, ಭಾರತ್ ರಾಷ್ಟ್ರ ಸಮಿತಿ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ನ್ಯಾಷನಲ್ ಕಾನ್ಫರೆನ್ಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಎಡ ಮತ್ತು ಡಿಎಂಕೆ ಪಕ್ಷಗಳು ಜಂಟಿಯಾಗಿ ಅರ್ಜಿ ಸಲ್ಲಿಸಿವೆ. ಇನ್ನೊಂದೆಡೆ ವಿಪಕ್ಷಗಳ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದೆ.
ಇದನ್ನೂ ಓದಿ:ಅತಂತ್ರ ವಿಧಾನಸಭೆ ಸೃಷ್ಟಿ ಬೇಡ, ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಬೇಕು: ಅಮಿತ್ ಶಾ ಸೂಚನೆ