ನವದೆಹಲಿ:ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಕಾಯ್ದಿರಿಸಿರುವ ತನ್ನ ಬಹುನಿರೀಕ್ಷಿತ ತೀರ್ಪನ್ನು ಇಂದು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಮ್ಯಾರಥಾನ್ ವಿಚಾರಣೆ ಪೂರ್ಣಗೊಳಿಸಿದ ನಂತರ ಮೇ 11 ರಂದು ತೀರ್ಪು ಕಾಯ್ದಿರಿಸಿತ್ತು.
ಮುುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪಂಚಪೀಠ ಈ ಕುರಿತ ತೀರ್ಪು ನೀಡಲಿದೆ. ಕೋರ್ಟ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ 18 ಸಲಿಂಗಿ ದಂಪತಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಕೋರ್ಟ್, ಏಪ್ರಿಲ್ 18 ರಿಂದ ಆರಂಭಿಸಿತ್ತು. ಅರ್ಜಿದಾರರು ಮತ್ತು ಪ್ರತಿವಾದಿಗಳ ದೀರ್ಘ ವಾದ ಆಲಿಸಿದ ಕೋರ್ಟ್ ಕಡೆಗೆ ಮೇ 11 ರಂದು ವಿಚಾರಣೆ ಪೂರ್ಣಗೊಳಿಸಿತ್ತು.
ಕೋರ್ಟ್ನಲ್ಲಿ ವಾದಗಳ ಸಂದರ್ಭದಲ್ಲಿ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು, ಯಾವುದೇ ಸಾಂವಿಧಾನಿಕ ಘೋಷಣೆ ಹೊರಡಿಸುವುದು ಸಾಮಾಜಿಕ ಜೀವನದಲ್ಲಿ ಸರಿಯಾದ ಕ್ರಮವಾಗುವುದಿಲ್ಲ. ಇದು ಈಗಿನ ವಿವಾಹ ಪದ್ಧತಿಯನ್ನೇ ಬುಡಮೇಲು ಮಾಡಲಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಹಾಗೊಂದು ವೇಳೆ ಅವಕಾಶ ನೀಡಿದ್ದೇ ಆದಲ್ಲಿ ಮುಂದಾಗುವ ವಿದ್ಯಮಾನಗಳ ಬಗ್ಗೆ ಊಹಿಸಲೂ ಸಾಧ್ಯವಾಗುವುದಿಲ್ಲ. ಸಮಾಜದ ಮೇಲೆ ಕೆಟ್ಟ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು.