ನವದೆಹಲಿ: ರೈಲ್ವೆ ಭೂಮಿ ಒತ್ತುವರಿ ತೆರವು ನೋಟಿಸ್ ಕುರಿತು ಉತ್ತರಾಖಂಡ ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. ಹಲ್ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ ಇರುವ ರೈಲ್ವೆ ಇಲಾಖೆ ಜಾಗದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್‌ನ ಅಧಿಕಾರಿಗಳು ಆದೇಶಿಸಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತು ಸುಪ್ರೀಂಕೋರ್ಟ್ ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ. ಹಾಗೇ ಫೆಬ್ರವರಿ 7 ರಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದೆ.
ಜೊತೆಗೆ, 50,000 ಜನರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಸುಪ್ರೀಂಕೊರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ "ಅಲ್ಲಿ ವಾಸಿಸುತ್ತಿದ್ದ ಜನರಿಗೆ ನಾವು ಮೊದಲೇ ಇದು ಭಾರತೀಯ ರೈಲ್ವೆಗೆ ಸೇರಿದ ಜಾಗ ಎಂದು ಹೇಳಿದ್ದೆವು, ಈಗ ನ್ಯಾಯಾಲಯದ ಆದೇಶದ ಪ್ರಕಾರ ನಾವು ಮುಂದುವರಿಯುತ್ತೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
1947 ರಿಂದ ಅಲ್ಲಿ ವಾಸವಾಗಿದ್ದವರನ್ನು ವಾರದಲ್ಲಿ ಹೇಗೆ ಖಾಲಿ ಮಾಡಿಸುತ್ತೀರಿ?:ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ಕಳೆದ ಡಿಸೆಂಬರ್ 20 ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ವಿಶೇಷ ರಜೆ ಅರ್ಜಿಗಳ ವಿಚಾರಣೆ ನಡೆಸಿ, ಉತ್ತರಾಖಂಡ ರಾಜ್ಯ ಮತ್ತು ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಎರಡು ಸಮಸ್ಯೆಗಳಿವೆ. ಒಂದನೆಯದ್ದು, ತೆರವುಗೊಂಡ ಜನರು ಆ ಜಾಗದ ಗುತ್ತಿಗೆಯ ಹಕ್ಕುದಾರರಾಗಿದ್ದಾರೆ.
ಎರಡನೇಯದಾಗಿ, ಅವರು ಭಾರತಕ್ಕೆ 1947ರ ನಂತರ ವಲಸೆ ಬಂದವರು ಎಂದು ಹೇಳಿಕೊಂಡಿದ್ದಾರೆ. ಆ ಜನರು ಇಷ್ಟು ವರ್ಷಗಳ ಕಾಲ ಅಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಏಳು ದಿನಗಳಲ್ಲಿ ಅವರನ್ನು ತೆರವುಗೊಳಿಸಲು ನೀವು ಹೇಗೆ ಹೇಳುತ್ತೀರಿ?" ಎಂದು ನ್ಯಾಯಮೂರ್ತಿ ಎಸ್‌ಕೆ ಕೌಲ್ ಸರ್ಕಾರ ಮತ್ತು ರೈಲ್ವೆಯನ್ನು ಪ್ರಶ್ನಿಸಿದ್ದಾರೆ.