ನವದೆಹಲಿ:ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಪರಿಹಾರವಾಗಿ 12,000 ಕೋಟಿ ರೂಪಾಯಿಗಳನ್ನು ಠೇವಣಿ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಎನ್‌ಜಿಟಿ ಆದೇಶ ಪ್ರಶ್ನಿಸಿ ಕಳೆದ ವರ್ಷ ನವೆಂಬರ್ ತಿಂಗಳಲಿನಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ. ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಜಿಟಿ ನೀಡಿರುವ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಹೇಳಿ ಈ ಆದೇಶ ಮಾಡಿತು.
ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ನ್ಯಾಯ ಪೀಠದ ಮುಂದೆ ತಮ್ಮ ವಾದ ಮಂಡಿಸಿದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್‌ಟಿಪಿಗೆ ಟೆಂಡರ್ ನೀಡಿದ್ದು, ಕೆಲಸ ನಡೆಯುತ್ತಿದೆ. ಆದರೂ ಎನ್‌ಜಿಟಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿದೆ ಎಂದು ವಾದ ಮಂಡಿಸಿದರು. ಇಷ್ಟೊಂದು ದಂಡ ಪಾವತಿಸುವುದು ಕಷ್ಟ ಎಂಬುದನ್ನು ಪೀಠಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಅಂತಿಮವಾಗಿ ವಾದ ಪ್ರತಿವಾದ ಆಲಿಸಿದ ಕೋರ್ಟ್ ಹಸಿರು ನ್ಯಾಯಮಂಡಳಿ ಆದೇಶಕ್ಕೆ ತಡೆ ನೀಡಿ ಆದೇಶ ಮಾಡಿತು.