ನವದೆಹಲಿ:ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ವಿವಾದಾಸ್ಪದ ಪೋಸ್ಟ್‌ಗಳನ್ನು ತೆಗೆಯಲು ನೀಡಿದ್ದ ಆದೇಶಕ್ಕೆ ಅನುಸಾರವಾಗಿ ರೂಪಾ ಅವರು ಪ್ರಮಾಣಪತ್ರ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವಂತೆ ಐಪಿಎಸ್ ರೂಪಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 'ಇಬ್ಬರ ನಡುವಿನ ಎಲ್ಲ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ನಾವು ಪ್ರಯತ್ನ ನಡೆಸುತ್ತಿದ್ದೇವೆ. ಈ ಕಾರಣದಿಂದ ಇಬ್ಬರಲ್ಲಿ ಯಾರು ಕೂಡ ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳಿಗೆ ಸಂದರ್ಶನ ಅಥವಾ ಇನ್ಯಾವುದೇ ಮಾಹಿತಿಯನ್ನು ಯಾವುದೇ ರೂಪದಲ್ಲಿ ನೀಡಬಾರದು' ಎಂದು ನ್ಯಾಯಪೀಠ ತಿಳಿಸಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಅದರ ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿಪಡಿಸಲಾಗಿದೆ.
ರೋಹಿಣಿ ಸಿಂಧೂರಿ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಡಿಸೆಂಬರ್ 14ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಎಲ್ಲ ಪೋಸ್ಟ್‌ಗಳನ್ನು ಅಳಿಸುವುದು ಅಸಾಧ್ಯವಾದರೆ, ರೋಹಿಣಿ ಸಿಂಧೂರಿ ವಿರುದ್ಧದ ಎಲ್ಲ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಕನಿಷ್ಠ ಪಕ್ಷ ಪೋಸ್ಟ್ವೊಂದನ್ನು ಹಾಕುವಂತೆ ಡಿ. ರೂಪಾ ಅವರಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು.