ನವದೆಹಲಿ :ಕೋವಿಡ್-19 ಸಾಂಕ್ರಾಮಿಕದ ನಡುವೆ ವಾಯು ಮಾಲಿನ್ಯವನ್ನು ಪರಿಶೀಲಿಸಲು ಈ ವರ್ಷ ಕಾಳಿ ಪೂಜೆ, ದೀಪಾವಳಿ ಮತ್ತು ಇತರ ಹಬ್ಬಗಳ ಸಮಯದಲ್ಲಿ ಪಟಾಕಿಗಳನ್ನು ನಿಷೇಧಿಸುವ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರ ವಿಶೇಷ ಪೀಠವು, ನಿಷೇಧಿತ ಪಟಾಕಿಗಳು ಮತ್ತು ಸಂಬಂಧಿತ ವಸ್ತುಗಳನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಸಾಧ್ಯತೆಯನ್ನು ತಿಳಿಸುವಂತೆ ಬಂಗಾಳ ಸರ್ಕಾರಕ್ಕೆ ಕೇಳಿದೆ.
ದೀಪಾವಳಿ ರಜೆಗೂ ಮುನ್ನ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು, ರಾಜ್ಯದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಬಳಕೆ ಮತ್ತು ಖರೀದಿಯನ್ನು ನಿಷೇಧಿಸಿ ಅಕ್ಟೋಬರ್ 29ರಂದು ಹೈಕೋರ್ಟ್ ನೀಡಿದ ಆದೇಶದ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಿತು.
ಈ ವರ್ಷ ಕಾಳಿ ಪೂಜೆ, ದೀಪಾವಳಿ ಆಚರಣೆ ಮತ್ತು ಛತ್ ಪೂಜೆ, ಜಗದ್ಧಾತ್ರಿ ಪೂಜೆ, ಗುರುನಾನಕ್ ಅವರ ಜನ್ಮದಿನ ಮತ್ತು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಮುನ್ನಾದಿನದ ಆಚರಣೆಗಳಲ್ಲಿ ಯಾವುದೇ ರೀತಿಯ ಪಟಾಕಿಗಳ ಬಳಕೆ, ಪ್ರದರ್ಶನ ಅಥವಾ ಪಟಾಕಿಗಳನ್ನು ಸಿಡಿಸದಂತೆ ರಾಜ್ಯವು ಖಚಿತಪಡಿಸಿಕೊಳ್ಳಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿತ್ತು. ಮೇಣ ಅಥವಾ ಎಣ್ಣೆ ಆಧಾರಿತ ದೀಪಗಳನ್ನು ಮಾತ್ರ ಬಳಸಬಹುದು ಎಂದು ಹೇಳಿತ್ತು.