ಹೈದರಾಬಾದ್: ಸರ್ಕಾರಿ ನೌಕರಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿನ ಮೀಸಲಾತಿ ನಿಯಮಗಳ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಲು ಮುಂದಾಗಿದೆ. ಕಳೆದ ವಾರ ಸುಪ್ರೀಂ ಕೋರ್ಟ್ ಕೈಗೊಂಡ ಈ ನಿರ್ಧಾರದಿಂದ ಮೀಸಲಾತಿಯ ಕುರಿತು ಬಹು ದೂರಗಾಮಿ ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ. ಕಳೆದ ಮೂರು ದಶಕಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ಕಾಯ್ದೆಗಳು ಬದಲಾಗಬಹುದು.
ಯಾವುದೇ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ 50ರಷ್ಟು ಮೀರಕೂಡದು ಎಂದು ಸುಪ್ರೀಂ ಕೋರ್ಟ್ ಮೂರು ದಶಕಗಳ ಹಿಂದೆ ಆದೇಶ ನೀಡಿತ್ತು. ಪ್ರಮುಖವಾಗಿ ತನ್ನ ಈ ಹಳೆಯ ಆದೇಶವನ್ನೇ ಸುಪ್ರೀಂ ಕೋರ್ಟ್ ಮರುಪರಿಶೀಲಿಸಲು ಮುಂದಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ಮಾಡಿದ 102ನೇ ತಿದ್ದುಪಡಿಯಿಂದ, ಹಿಂದುಳಿದ ವರ್ಗದವರನ್ನು ಗುರುತಿಸುವ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಬರುತ್ತಿದೆಯಾ ಎಂಬುದನ್ನು ಸಹ ಸುಪ್ರೀಂ ಕೋರ್ಟ್ ಪರಿಶೀಲನೆ ಮಾಡಲಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದಲ್ಲಿ ಜಾರಿಗೊಳಿಸಿದ ಮರಾಠಾ ಮೀಸಲಾತಿಯು ಸಂವಿಧಾನ ಬದ್ಧವಾಗಿದೆಯೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ನಿಲುವು ತಳೆಯಲಿದೆ.
ಮೇಲೆ ಪ್ರಸ್ತಾಪಿಸಲಾದ ಅಂಶಗಳನ್ನು ಹೊರತುಪಡಿಸಿ, 5 ಜನ ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠ 103ನೇ ಸಂವಿಧಾನ ತಿದ್ದುಪಡಿಯ ಕುರಿತಾಗಿ ವಿಚಾರಣೆ ನಡೆಸಲಿದೆ. ಸಂವಿಧಾನದ 103ನೇ ತಿದ್ದುಪಡಿಯು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೌಕರಿ ಹಾಗೂ ಶಿಕ್ಷಣದಲ್ಲಿ ಈಗಿರುವ ಮೀಸಲಾತಿ ಮೇಲೆ ಮತ್ತೆ ಶೇ 10 ರಷ್ಟು ಮೀಸಲಾತಿ ನೀಡುವ ಅಧಿಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಹೀಗೆ ಮೊದಲೇ ಇರುವ ಮೀಸಲಾತಿಯ ಮೇಲೆ ಇನ್ನೂ ಶೇ 10 ರಷ್ಟು ಮೀಸಲಾತಿ ನೀಡುವುದರಿಂದ ಇದು ಒಟ್ಟಾರೇ ಶೇ 50 ರಷ್ಟು ಮೀಸಲಾತಿ ಪ್ರಮಾಣವನ್ನು ಮೀರುವುದರಿಂದ ಇದರ ಬಗ್ಗೆಯೂ ಸುಪ್ರೀಂ ಕೋರ್ಟ್ನ ಪ್ರತ್ಯೇಕ ಪೀಠವು ಪರಾಮರ್ಶೆ ನಡೆಸಲಿದೆ.
ಮೀಸಲಾತಿ ಪುನರ್ ಪರಿಶೀಲನೆಗೆ ಕಾರಣವಾದ ಅಂಶಗಳು
ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಮರಾಠಾ ಜನಾಂಗದವರಿಗೆ ನೌಕರಿ ಹಾಗೂ ಶಿಕ್ಷಣದಲ್ಲಿ ಶೇ 16 ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೆಲ ವ್ಯಕ್ತಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ರಾಜ್ಯ ಸರ್ಕಾರದ ಕಾನೂನನ್ನು ಮಾನ್ಯ ಮಾಡಿತ್ತಾದರೂ, ನೌಕರಿಯಲ್ಲಿನ ಮೀಸಲಾತಿಯನ್ನು ಶೇ 13ಕ್ಕೆ ಹಾಗೂ ಶಿಕ್ಷಣದಲ್ಲಿನ ಮೀಸಲಾತಿಯನ್ನು ಶೇ 12ಕ್ಕೆ ಇಳಿಸಿತ್ತು.
ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿ ಕಾಯ್ದೆ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳ ಮೀಸಲಾತಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿನ ನೇಮಕಾತಿಯಲ್ಲಿನ ಮೀಸಲಾತಿ) 2018 ನ್ನು ಮಹಾರಾಷ್ಟ್ರ ಸರ್ಕಾರವು ನವೆಂಬರ್ 2018 ರಲ್ಲಿ ಜಾರಿಗೊಳಿಸಿತ್ತು.
ಇದನ್ನೂ ಓದಿ:ಶೇ 50 ಮೀಸಲಾತಿ ತೀರ್ಪು ಮರುಪರಿಶೀಲಿಸಲು ಸುಪ್ರೀಂ ಸಮ್ಮತಿ: ರಾಜ್ಯ ಸರ್ಕಾರಗಳಿಗೆ ನೋಟಿಸ್
ಮರಾಠಾ ಮೀಸಲಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ
ಬಾಂಬೆ ಹೈಕೋರ್ಟಿನ ಆದೇಶದಿಂದ ಅಸಂತುಷ್ಟರಾಗಿದ್ದ ಕೆಲವರು ಜುಲೈ 2019 ರಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಮರಾಠಾ ಮೀಸಲಾತಿ ಕಾಯ್ದೆಯು ಕೇವಲ ಒಂದು ಸಮುದಾಯಕ್ಕಾಗಿ ರೂಪಿಸಲಾದ ಕಾಯ್ದೆಯಾಗಿದ್ದು, ಇದರಿಂದ ಎಲ್ಲರಿಗೂ ಸಮಾನತೆಯನ್ನು ನೀಡುವ ಸಂವಿಧಾನದ ಆಶಯಕ್ಕೆ ಭಂಗ ಬಂದಿದೆ ಎಂದು ದೂರುದಾರರು ವಾದಿಸಿದ್ದರು.
ಸೆಪ್ಟೆಂಬರ್ 2020ರಲ್ಲಿ ಮರಾಠಾ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠ, ಕಾಯ್ದೆ ಜಾರಿಗೆ ತಡೆ ನೀಡಿತ್ತು.
ಸುಪ್ರೀಂ ಕೋರ್ಟ್ ಮುಂದೆ ಪರಿಗಣನೆಗೆ ಬಂದ ವಿಷಯಗಳು
ಮರಾಠಾ ಮೀಸಲಾತಿ ಕಾಯ್ದೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ತಿಳಿದುಕೊಳ್ಳಲು ಇಂದ್ರ ಸಾಹ್ನಿ ವರ್ಸಸ್ ಭಾರತ ಸರ್ಕಾರ ಪ್ರಕರಣದ ಬಗ್ಗೆ ಅರಿತುಕೊಳ್ಳುವುದು ಅಗತ್ಯ.