ನವದೆಹಲಿ:1995ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿ ಪಾಟ್ನಾದ ಹೈಕೋರ್ಟ್ 2008ರಲ್ಲಿ ನೀಡಿದ್ದ ತೀರ್ಪನ್ನು ಇದೇ ಆಗಸ್ಟ್ 18ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಆಗಸ್ಟ್ 23, 1995 ರಂದು, ವಿಧಾನಸಭಾ ಚುನಾವಣೆ ವೇಳೆ ಇಬ್ಬರ ಕೊಲೆ ನಡೆದಿತ್ತು. ಪ್ರಭುನಾಥ್ ಸಿಂಗ್ ಅವರ ಅಣತಿಯಂತೆ ರಾಜೇಂದ್ರ ರೈ ಮತ್ತು ದರೋಗಾ ರೈ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ತಪ್ಪಿತಸ್ಥ ಎಂದು ಹೇಳಿದ್ದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ, ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಈ ಎರಡು ಆಯ್ಕೆಗಳಿವೆ ಎಂದು ತಿಳಿಸಿರುವ ಪೀಠ, ಮೃತರ ಕುಟುಂಬಸ್ಥರಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚಿಸಿ ಆದೇಶ ಕೊಟ್ಟಿದೆ. 307 ಸೆಕ್ಷನ್ಗಾಗಿ ಪ್ರಭುನಾಥ್ ಸಿಂಗ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ನಾಥ್, 'ಇಂತಹ ಪ್ರಕರಣವನ್ನು ನಾನು ನೋಡಿಲ್ಲ' ಎಂದು ಆದೇಶ ನೀಡುವ ವೇಳೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
1995ರ ಮಾರ್ಚ್‌ನಲ್ಲಿ ರಾಜೇಂದ್ರ ರೈ (18) ಮತ್ತು ದರೋಗಾ ರೈ (47) ಅವರನ್ನು ಛಾಪ್ರಾದ ಮತಗಟ್ಟೆಯೊಂದರ ಬಳಿ ಕೊಂದಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದ ನ್ಯಾಯಪೀಠ, ಆ. 18ರಂದು ಸಿಂಗ್ ಅವರನ್ನು ದೋಷಿ ಎಂದು ಹೇಳಿತ್ತು. ಸೆಪ್ಟಂಬರ್ 1ಕ್ಕೆ ತೀರ್ಪು ಕಾಯ್ದಿರಿಸಿತ್ತು.