ನವದೆಹಲಿ: ಇವಿಎಂ ಮತಯಂತ್ರದ ಮೂಲಕ ಹಾಕಲಾದ ಮತ ವಿವಿಪ್ಯಾಟ್ನಲ್ಲಿ ಸರಿಯಾಗಿ ದಾಖಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಮತದಾರನಿಗೆ ಅವಕಾಶವಿಲ್ಲ. ಇದನ್ನು ದೃಢೀಕರಿಸುವ ಪರ್ಯಾಯ ಮಾರ್ಗದ ಬಗ್ಗೆ ಸ್ಪಷ್ಟನೆ ನೀಡಲು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳು ವಿವಿಪ್ಯಾಟ್ (ಪೇಪರ್ ಆಡಿಟ್ ಟ್ರಯಲ್)ನಲ್ಲಿ ದೃಢೀಕರಣಗೊಂಡ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು, ಈ ಬಗ್ಗೆ ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.
ಚುನಾವಣೆ ಮೇಲೆಯೇ ಅನುಮಾನ:ವಾದ ಮಂಡನೆಯ ವೇಳೆ 'ದೇಶದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಾಲಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಕೆಲವೊಮ್ಮೆ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯ ಮೇಲೆಯೇ ಅನುಮಾನ ಮೂಡಿಸುವಂತೆ ಮಾಡುತ್ತವೆ' ಎಂದು ನ್ಯಾಯಪೀಠ ಹೇಳಿತು. ಮತ ದೃಢೀಕರಣದ ಬಗ್ಗೆ ತಿಳಿದುಕೊಳ್ಳುವುದು ದೇಶದ ಪ್ರತಿ ಮತದಾರನ ಪ್ರಮುಖ ಹಕ್ಕು ಎಂದೇಳಿದ ಕೋರ್ಟ್, ವಿದ್ಯುನ್ಮಾನ ಮತಯಂತ್ರಗಳ ಮೂಲಕ ಚಲಾವಣೆಯಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ತಾಳೆ ಹಾಕಿ ದೃಢೀಕರಿಕೊಳ್ಳುವ ಕುರಿತು ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಆದೇಶಿಸಿತು.
ಮತ ದೃಢೀಕರಣ ಬೇಕಿದೆ:ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರ ವಾದ ಮಂಡಿಸಿದ ವಕೀಲ ಭೂಷಣ್ ಅವರಿಗೆ ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿ, ಚುನಾವಣೆಯ ಪ್ರತಿ ಹೆಜ್ಜೆಯನ್ನು ಅನುಮಾನಿಸುವುದು ಅತಿರೇಕವಲ್ಲದೇ ಎಂದರು. ಈ ವೇಳೆ ವಕೀಲ ಭೂಷಣ್, ವಿದ್ಯುನ್ಮಾನ ಮತಯಂತ್ರಗಳ ಹ್ಯಾಕಿಂಗ್‌ಗೆ ಸಂಬಂಧಿಸಿದ ಎಲ್ಲ ಆರೋಪಗಳಲ್ಲಿ ನನಗೂ ನಂಬಿಕೆ ಇಲ್ಲ. ಆದರೆ, ಕೆಲವೆಡೆ ವಿವಿಪ್ಯಾಟ್ ಮತ್ತು ಇವಿಎಂ ಮತ ಎಣಿಕೆಗಳು ಹೊಂದಿಕೆಯಾದರೆ, ಕೆಲವೆಡೆ ಹೊಂದಿಕೆಯಾಗಿಲ್ಲ. ಅಲ್ಲದೇ ಪರೀಕ್ಷಾರ್ಥವಾಗಿ ಇವಿಎಂ ಮತ ಎಣಿಕೆಗಳೊಂದಿಗೆ ಕೆಲವೇ ವಿವಿಪ್ಯಾಟ್‌ಗಳನ್ನು ತಾಳೆ ಮಾಡಲಾಗುತ್ತಿದೆ. ಹಾಗಾಗಿ ಮತದಾರರರಿಗೆ ದೃಢೀಕರಣದ ಅನಿವಾರ್ಯವಿದೆ. ಚುನಾವಣೆ ಆಯೋಗ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ವಾದಿಸಿದರು.
ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮತದಾರರಿಗೆ ತನ್ನ ಮತಗಳನ್ನು ಸರಿಯಾಗಿ ಚಲಾಯಿಸಲಾಗಿದೆಯೇ? ಅದು ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಯಾವುದೇ ಅವಕಾಶವಿಲ್ಲ. ಪಾರದರ್ಶಕತೆಯ ಹಿತದೃಷ್ಟಿಯಿಂದ ಇಂತಹ ಪರಿಶೀಲನೆಯನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕು ಎಂದು ಎಡಿಆರ್ ತನ್ನ ಮನವಿಯಲ್ಲಿ ಪ್ರತಿಪಾದಿಸಿದೆ.
2019 ರಲ್ಲಿ, ವಿವಿಪ್ಯಾಟ್ ಪೇಪರ್ ಟ್ರಯಲ್ ಅನ್ನು ಪರಿಶೀಲಿಸುವ ಇವಿಎಂಗಳ ಸಂಖ್ಯೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರ ಅಥವಾ ವಿಧಾನಸಭೆ ಕ್ಷೇತ್ರಕ್ಕೆ 1 ಇವಿಎಂನಿಂದ 5 ಇವಿಎಂಗಳಿಗೆ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಕೋರ್ಟ್‌ನ ನೀಡಿದ ನಿರ್ದೇಶನಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಕೋರಲಾಗಿದೆ. ಅರ್ಜಿಯ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗದ ಸ್ಥಾಯಿ ವಕೀಲರಿಗೆ ನೀಡುವಂತೆ ಪೀಠ ಸೋಮವಾರ ಸೂಚಿಸಿದೆ.
ಇದನ್ನೂ ಓದಿ: Delhi ordinance:ದೆಹಲಿ ಸುಗ್ರೀವಾಜ್ಞೆ ವಿಷಯ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕಾಗಬಹುದು.. ಸುಪ್ರೀಂಕೋರ್ಟ್