ನವದೆಹಲಿ:ನಕ್ಸಲ್ ನಂಟು ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ. ನಾಲ್ಕು ತಿಂಗಳೊಳಗೆ ಅರ್ಹತೆಯ ಮೇಲೆ ಹೊಸದಾಗಿ ಪರಿಗಣಿಸಲು ಪ್ರಕರಣವನ್ನು ಹೈಕೋರ್ಟ್‌ಗೆ ಹಿಂತಿರುಗಿಸಿದೆ.
ಬಾಂಬೆ ಹೈಕೋರ್ಟ್ ನೀಡಿದ ಆದೇಶವು 'ಅಮಾನ್ಯ ಮತ್ತು ಕಾನೂನಿನಲ್ಲಿ ಕೆಟ್ಟ' ಆದೇಶ ಎಂದು ಸುಪ್ರೀಂ ಕಂಡುಕೊಂಡ ನಂತರ ಪ್ರಕರಣವನ್ನು ಮರುಪರಿಶೀಲಿಸಿದೆ. ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಸಿಟಿ ರವಿಕುಮಾರ್ ಅವರಿದ್ದ ಪೀಠವು ಸಾಯಿಬಾಬಾ ಮತ್ತು ಇತರ ಆರೋಪಿಗಳ ಮೇಲ್ಮನವಿಯನ್ನು ಹಿಂದಿನ ಪ್ರಕರಣದಲ್ಲಿ ಖುಲಾಸೆ ಮಾಡದ ಬೇರೆ ಪೀಠದ ಮುಂದೆ ಇಡುವಂತೆಯೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ.
ಇದನ್ನೂ ಓದಿ:ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ
ನಾಗ್ಪುರ ಪೀಠದ ಹಿಂದಿನ ಆದೇಶದಿಂದ ಪ್ರಭಾವಿತರಾಗದೇ, ಹೈಕೋರ್ಟ್ ತನ್ನ ಅರ್ಹತೆಯ ಮೇಲೆ ಮತ್ತು ಕಾನೂನಿನ ಪ್ರಕಾರ ವಿಷಯವನ್ನು ಕಟ್ಟುನಿಟ್ಟಾಗಿ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಆಯಾ ಪ್ರತಿವಾದಿಗಳಿಗೆ ಲಭ್ಯವಿರುವ ಎಲ್ಲ ವಾದಗಳು ಮತ್ತು ಪ್ರತಿವಾದಗಳನ್ನು ಹೈಕೋರ್ಟ್ ಪರಿಗಣಿಸಲು ಮುಕ್ತವಾಗಿದೆ ಎಂದೂ ಹೇಳಿದೆ. ಮಹಾರಾಷ್ಟ್ರ ಸರ್ಕಾರದ ಪರವಾಗಿ ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್ ಮತ್ತು ಹಿರಿಯ ವಕೀಲ ಆರ್ ಬಸಂತ್ ಅವರು ಈ ಪ್ರಕರಣದಲ್ಲಿ ಸಾಯಿಬಾಬಾ ಪರವಾಗಿ ವಾದ ಮಂಡಿಸಿದ್ದರು.