ನವದೆಹಲಿ: ಬಿಹಾರ ಸರ್ಕಾರವು ತನ್ನ ಜಾತಿ ಸಮೀಕ್ಷೆಯ ಹೆಚ್ಚಿನ ಮಾಹಿತಿ ಪ್ರಕಟಿಸದಂತೆ ತಡೆ ನೀಡುವಂತೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ನಿರಾಕರಿಸಿದೆ. ರಾಜ್ಯ ಸರ್ಕಾರವು ಯಾವುದೇ ನೀತಿ, ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಬಿಹಾರ ಸರ್ಕಾರ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯ ಹೆಚ್ಚಿನ ಅಂಕಿಅಂಶಗಳನ್ನು ಪ್ರಕಟಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ಪೀಠವು ಸಮೀಕ್ಷೆಗೆ ಅನುಮತಿ ನೀಡಿದ ಪಾಟ್ನಾ ಹೈಕೋರ್ಟ್‌ನ ಆಗಸ್ಟ್ 1ರ ಆದೇಶ ಪ್ರಶ್ನಿಸಿದ್ದ ಅರ್ಜಿಗಳ ಗುಂಪಿಗೆ ಔಪಚಾರಿಕ ನೊಟೀಸ್ ನೀಡಿದೆ. ಅಲ್ಲದೇ, ಇದರ ವಿಚಾರಣೆಯನ್ನು ಮುಂದಿನ 2024ರ ಜನವರಿಯಲ್ಲಿ ಪಟ್ಟಿ ಮಾಡಿದೆ.
ರಾಜ್ಯ ಸರ್ಕಾರವು ತಡೆಯಾಜ್ಞೆ ಬರುವ ಮುನ್ನವೇ ಕೆಲ ಮಾಹಿತಿ ಪ್ರಕಟಿಸಿದೆ. ಹೀಗಾಗಿ ಹೆಚ್ಚುವರಿ ಮಾಹಿತಿ ಪ್ರಕಟಣೆಗೆ ಸಂಪೂರ್ಣ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. "ಈ ಸಂದರ್ಭದಲ್ಲಿ ನಾವು ಯಾವುದೇ ತಡೆ ನೀಡಲ್ಲ. ರಾಜ್ಯ ಸರ್ಕಾರ ಅಥವಾ ಯಾವುದೇ ಸರ್ಕಾರವು ನೀತಿ, ನಿರ್ಧಾರ ತೆಗೆದುಕೊಳ್ಳಲು ನಿಲ್ಲಿಸಲು ಸಾಧ್ಯವಿಲ್ಲ. ನಾವು ತಡೆಯಲು ಮುಂದಾಗುವುದು ತಪ್ಪಾಗುತ್ತದೆ. ಈ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರದ ಅಧಿಕಾರಕ್ಕೆ ಸಂಬಂಧಿಸಿದ ಇತರ ವಿಷಯವನ್ನು ನಾವು ಪರಿಶೀಲಿಸಲಿದ್ದೇವೆ" ಎಂದು ನ್ಯಾಯಪೀಠ ಹೇಳಿತು.