ನವದೆಹಲಿ:ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸಮೀಕ್ಷೆ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಮಧ್ಯಂತರ ಆದೇಶವನ್ನು ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಆದರೂ ಜ್ಞಾನವಾಪಿ ಆವರಣದ ಸಮೀಕ್ಷೆಯ ವಿರುದ್ಧ ಮುಸ್ಲಿಂ ಮುಖಂಡರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆ ವಿರುದ್ಧ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದು, ಮುಸ್ಲಿಂ ಮುಖಂಡರ ಪರ ಹಿರಿಯ ವಕೀಲರಾದ ಹುಝೆಫಾ ಅಹ್ಮದಿ ವಾದಮಂಡನೆ ಮಾಡಿದ್ದಾರೆ. ಈಗ ಅರ್ಜಿಯನ್ನು ತುರ್ತುಪಟ್ಟಿಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ವಾರಣಾಸಿ ಆಸ್ತಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸುವಂತೆ ಸೂಚಿಸಿರುವ ಸಂಬಂಧ ಅರ್ಜಿ ಸಲ್ಲಿಸಿದ್ದೇವೆ. ಜ್ಞಾನವಾಪಿ ಅನಾದಿ ಕಾಲದಿಂದಲೂ ಮಸೀದಿಯಾಗಿದೆ ಮತ್ತು ಸಮೀಕ್ಷೆಯನ್ನು ಆರಾಧನಾ ಸ್ಥಳಗಳ ಕಾಯ್ದೆಯು ಸ್ಪಷ್ಟವಾಗಿ ತಡೆಯುತ್ತದೆ ಎಂದು ಅಹ್ಮದಿ ಹೇಳಿದ್ದಾರೆ. ಸಮೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದ್ದು, ಸದ್ಯಕ್ಕೆ ಯಥಾಸ್ಥಿತಿಗೆ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಈ ವೇಳೆ 'ನೋಡೋಣ' ಎಂದು ಸಿಜೆಐ ಎನ್ವಿ ರಮಣ ಹೇಳಿದ್ದಾರೆ.
ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಗುರುವಾರ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ವೀಡಿಯೊಗ್ರಾಫಿ ಸಮೀಕ್ಷೆಯನ್ನು ನಡೆಸಲು ನೇಮಿಸಿದ್ದ ವಕೀಲರನ್ನು ಬದಲಿಸುವ ಮನವಿಯನ್ನು ತಿರಸ್ಕರಿಸಿತ್ತು. ಇದರ ಜೊತೆಗೆ ಮೇ 17ರೊಳಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಆದೇಶಿಸಿತ್ತು. ಒಂದು ವೇಳೆ ಸಮೀಕ್ಷೆಗೆ ಯಾರಾದರೂ ಅಡ್ಡಿಪಡಿಸಿದರೆ, ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಇದನ್ನೂ ಓದಿ:ಪುಣೆ ರೈಲು ನಿಲ್ದಾಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆ