ನವದೆಹಲಿ: ಇ -ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ 28.55 ಕೋಟಿ ವಲಸೆ ಕಾರ್ಮಿಕರು ಪಡಿತರ ಚೀಟಿಗಳನ್ನು ಹೊಂದಿದ್ದಾರೆಯೇ ಮತ್ತು ಅವರೆಲ್ಲರೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
28.55 ಕೋಟಿ ನೋಂದಾಯಿತ ವಲಸೆ ಕಾರ್ಮಿಕರಲ್ಲಿ ಎಷ್ಟು ಮಂದಿ ಪಡಿತರ ಚೀಟಿಗಳನ್ನು ಹೊಂದಿದ್ದಾರೆ ಮತ್ತು ಅವರಿಗೆ ಎನ್ಎಫ್ಎಸ್ಎ ಅಡಿಯಲ್ಲಿ ಆಹಾರದ ಪ್ರಯೋಜನಗಳನ್ನು ನೀಡಲಾಗುತ್ತಿದೆಯೇ ಎಂಬ ವಿವರಗಳನ್ನು ನೀಡುವಂತೆ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ಕೇಂದ್ರ ಸರ್ಕಾರವನ್ನು ಕೇಳಿದೆ. ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಎಎಸ್‌ಜಿ ಐಶ್ವರ್ಯಾ ಭಾಟಿ ಅವರು, ಕೇಂದ್ರ ಮತ್ತು ರಾಜ್ಯಗಳ ನಡುವೆ ದತ್ತಾಂಶವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ವಲಸಿಗರನ್ನು ತಲುಪಬೇಕು:ರಾಜ್ಯಗಳು ಮತ್ತು ಕೇಂದ್ರದ ನಡುವೆ ದತ್ತಾಂಶವನ್ನು ಹಂಚಿಕೊಳ್ಳುವುದರ ಕುರಿತು ನಾವು ಕೇಳಿಲ್ಲ. ಕೌಶಲ್ಯರಹಿತ ವಲಸಿಗರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆಯೇ ಎಂಬುದರ ಬಗ್ಗೆ ನಾವು ಆಸಕ್ತಿ ಹೊಂದಿದ್ದೇವೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ವಲಸಿಗರನ್ನು ತಲುಪಬೇಕು. ಮೊದಲಿಗೆ ಈಗಾಗಲೇ ನೋಂದಾಯಿಸಿದವರನ್ನು ತಲುಪಬೇಕು ಎಂದು ಎಂ.ಆರ್.ಶಾ ಹೇಳಿದರು.
ಇದನ್ನೂ ಓದಿ.. ಪಕ್ಷದಲ್ಲಿ ಬಳಸಿದ ಮುಸ್ಲಿಮೀನ್ ಪದವು ಜಾತ್ಯತೀತತೆಯ ತತ್ವ ಉಲ್ಲಂಘಿಸಲ್ಲ: ಸುಪ್ರೀಂಗೆ ಓವೈಸಿ ಪಕ್ಷದ ಅಫಿಡವಿಟ್