ನವದೆಹಲಿ: ಸುದ್ದಿ ವಾಹಿನಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಚಾಟಿ ಬೀಸಿದೆ. ಜನರ ಮನಸ್ಸನ್ನು ರೂಪಿಸುವ ದೊಡ್ಡ ಸ್ಥಾನವನ್ನು ಮಾಧ್ಯಮಗಳು ಹೊಂದಿದ್ದು, ಹೇಗೆ ಸಂಯಮದಿಂದ ಇರಬೇಕೆಂಬುವುದನ್ನು ಕಲಿಯಬೇಕೆಂದು ಸರ್ವೋಚ್ಛ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು ಸುದ್ದಿ ವಾಹಿನಿಗಳ ನಡೆಯನ್ನು ತುಂಬಾ ಅಪಾಯಕಾರಿ ಎಂದೂ ಅಸಮಾಧಾನ ವ್ಯಕ್ತಪಡಿಸಿದೆ.
ಧರ್ಮ ಸಂಸದ್ ಭಾಷಣ, ತಬ್ಲೀಘಿ ಜಮಾತ್ ಅಪರಾಧೀಕರಣ ಸೇರಿದಂತೆ ದ್ವೇಷ ಭಾಷಣವನ್ನು ತಡೆಯಲು ಸಾಮಾನ್ಯ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ಟಿವಿಗಳು ಸುದ್ದಿಗಳನ್ನು ಭಾವೋದ್ರೇಕಗೊಳಿಸುತ್ತವೆ. ಜನರು ಅವರಿಗೆ ಬಡಿಸಿರುವುದನ್ನು ಸೇವಿಸುತ್ತಾರೆ. ಅದರಂತೆ ತಮ್ಮ ಜೀವನವನ್ನು ಜನತೆ ರೂಪಿಸಿಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ವಾಕ್ ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಬರುತ್ತದೆ. ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡುವ ಹಕ್ಕು ಹೊಂದಿಲ್ಲ ಎಂಬುದನ್ನು ಮಾಧ್ಯಮಗಳು ಅರಿತುಕೊಳ್ಳಬೇಕು. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ, ಸುದ್ದಿಯಲ್ಲಿ ಏನನ್ನು ತೋರಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ವ್ಯತ್ಯಾಸವನ್ನು ಕಂಡುಕೊಳ್ಳಲು ಅವರು ಸಾಕಷ್ಟು ಪ್ರಬುದ್ಧರಾಗಿದ್ದಾಗಿ ಇದ್ದಾರೆಯೇ ಎಂಬುವುದೇ ಈಗಿನ ದೊಡ್ಡ ಪ್ರಶ್ನೆಯಾಗಿದೆ ಎಂದು ನ್ಯಾ.ಜೋಸೆಫ್ ಹೇಳಿದರು.
ಈ ಸ್ವಾತಂತ್ರ್ಯವನ್ನು ಅಜೆಂಡಾದೊಂದಿಗೆ ಚಲಾಯಿಸಿದರೆ, ನೀವು ನಿಜವಾಗಿ ಜನರಿಗೆ ಸೇವೆ ಸಲ್ಲಿಸುತ್ತಿಲ್ಲ ಎಂದೇ ಅರ್ಥವಾಗುತ್ತಿದೆ. ಜೊತೆಗೆ ನೀವು ಬೇರೆ ಯಾವುದೋ ಕಾರಣಕ್ಕಾಗಿ ಬೇರೆಯವರ ಸೇವೆ ಮಾಡುತ್ತಿದ್ದೀರಾ ಎಂದು ದ್ವೇಷ ಹರಡುವ ಸುದ್ದಿ ವಾಹಿನಿಗಳ ವಿರುದ್ಧ ಕಿಡಿಕಾರಿದರು. ಇದೇ ವೇಳೆ, ಇಡೀ ವಿಷಯದಲ್ಲಿ ಹಣದ ವಿಚಾರ ಸಹ ಬಹಳ ಪ್ರಭಾವ ಬೀರುವಂತೆ ಕಾಣುತ್ತಿದೆ, ಇದನ್ನು ಯಾರು ನಿರ್ದೇಶಿಸುತ್ತಾರೆ. ಅಂತಿಮವಾಗಿ ಎಲ್ಲವೂ ಟಿಆರ್‌ಪಿಗಳ ಮೇಲೆ ನಡೆಯುತ್ತಿವೆ. ಇದೇ ಮೂಲಭೂತ ಸಮಸ್ಯೆ ಮತ್ತು ದುರದೃಷ್ಟಕರ ಸಂಗತಿಯಾಗಿದೆ. ಇದರ ಬಗ್ಗೆ ಏನೂ ಮಾಡಲಾಗುತ್ತಿಲ್ಲ ಎಂದು ನ್ಯಾ.ಜೋಸೆಫ್ ಕಳವಳ ವ್ಯಕ್ತಪಡಿಸಿದರು.