ನವದೆಹಲಿ:ಕರ್ನಾಟಕದ ಶಾಲಾ ಕಾಲೇಜುಗಳ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಇದೇ ವಾರ ಪ್ರಕಟಿಸುವ ಸಾಧ್ಯತೆ ಇದೆ.
ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠದ ಜಡ್ಜ್ಗಳಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಮುಂದಿನ ವಾರ ನಿವೃತ್ತರಾಗಲಿದ್ದು, ಅದಕ್ಕೂ ಮೊದಲೇ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ನ್ಯಾಯಮೂರ್ತಿಗಳಾದ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠ 10 ದಿನಗಳ ಕಾಲ ವಾದವನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ಅರ್ಜಿಗಳ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.
ಹಿಜಾಬ್ ವಿಚಾರಣಾ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಗುಪ್ತಾ ಅವರು ಇದೇ 16 ರಂದು ನಿವೃತ್ತರಾಗಲಿರುವುದರಿಂದ ಈ ವಾರವೇ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು.