ನವದೆಹಲಿ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ ಆರೋಪಿ ಸಲ್ಲಿಸಿದ್ದ ಮನವಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. ಆದರೆ, ಆ ಪ್ರಕರಣವನ್ನು ಮಧುರೈಗೆ ವರ್ಗಾಯಿಸುವಂತೆ ಅಥವಾ ವಜಾಗೊಳಿಸುವಂತೆ ಆರೋಪಿ ಅರ್ಜಿ ಸಲ್ಲಿಸಿದ್ದನು.
ತಮಿಳುನಾಡು ಮೂಲದ ಇಸ್ಲಾಮಿಕ್ ಸಂಘಟನೆಗಳಿಂದ ಕರ್ನಾಟಕ ಹೈಕೋರ್ಟ್ ಜಡ್ಜ್ಗಳಿಗೆ ಜೀವ ಬೆದರಿಕೆ ಹಾಕಿರುವ ಆರೋಪವಿದ್ದು, ಈ ಬೆದರಿಕೆಯ ನಂತರ ಮುಖ್ಯ ನ್ಯಾಯಮೂರ್ತಿ ಸೇರಿ ಮೂವರು ನ್ಯಾಯಮೂರ್ತಿಗಳಿಗೆ ವೈ ಶ್ರೇಣಿಯ ಭದ್ರತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ನಂತರ ತನಿಖೆ ನಡೆಸಿದ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.