ನವದೆಹಲಿ:ಹಿಂದು ದೇವಸ್ಥಾನದ ಮೇಲೆ ನಿರ್ಮಿಸಲಾದ ಜ್ಞಾನವಾಪಿ ಮಸೀದಿಯ ಸರ್ವೇಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಕೋರಲಾಗಿದ್ದ ಅರ್ಜಿಯನ್ನು ಮರು ಸ್ಥಾಪಿಸಿ, ವಿಚಾರಣೆ ನಡೆಸಲು ಆದೇಶಿಸಿದೆ. ಜ್ಞಾನವಾಪಿ ಮಸೀದಿ ಸರ್ವೇ ನಡೆಸಬೇಕೆಂದು ಕೋರಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯ, ಮಸೀದಿ ಸರ್ವೇಗೆ ಅನುಮತಿ ನೀಡಿತ್ತು. ಅದರಂತೆ ಸರ್ವೇ ಕಾರ್ಯ ಕೂಡ ಆರಂಭವಾಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಸಿದ ಜ್ಞಾನವಾಪಿ ಮಸೀದಿ ಸಮಿತಿಯು ಸರ್ವೇ ಕಾರ್ಯಕ್ಕೆ ತಡೆ ತಂದಿತ್ತು.
ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ಸುಪ್ರೀಂ, ಜ್ಞಾನವಾಪಿ ಮಸೀದಿಯಲ್ಲಿ ಯಾವುದೇ ಕಾರ್ಯ ನಡೆಸದಂತೆ ಸೂಚಿಸಿ ಆದೇಶಿಸಿತ್ತು. ಈ ಆದೇಶ ಜುಲೈ 26 ಸಂಜೆ 5 ಗಂಟೆಯವರೆಗೆ ಅನ್ವಯವಾಗುವಂತೆ ನೀಡಲಾಗಿತ್ತು. ಇದೀಗ ಅವಧಿ ಮುಗಿಯುತ್ತಿರುವ ಕಾರಣ ಸುಪ್ರೀಂಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಯಥಾಸ್ಥಿತಿ ಕಾಪಾಡುವ ಅರ್ಜಿಯನ್ನು ಮರು ವಿಚಾರಣೆಗೆ ಸೂಚಿಸಿ ಬುಧವಾರ ಹೊಸದಾಗಿ ಆದೇಶಿಸಿದೆ.
ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂಥೆಜಾಮಿಯಾ ಸಮಿತಿಯ ಪರ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದರು. ಈ ವೇಳೆ, ಎಎಸ್‌ಐ ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಿದ ಮಧ್ಯಂತರ ಅರ್ಜಿ ಬದಲಿಗೆ ಯಥಾಸ್ಥಿತಿ ಕಾಪಾಡುವ ಅರ್ಜಿ ವಿಚಾರಣೆಗೆ ಸೂಚಿಸಿತು.