ನವದೆಹಲಿ: 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಂಟು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ, ಇತರ ನಾಲ್ವರ ಜಾಮೀನು ಅರ್ಜಿಗಳನ್ನು ಪರಿಗಣಿಸಲು ನ್ಯಾಯ ಪೀಠ ನಿರಾಕರಿಸಿದೆ.
ಗುಜರಾತ್ನಲ್ಲಿ 2002ರ ಫೆಬ್ರವರಿ 27ರಂದು ಗೋಧ್ರಾ ರೈಲು ಹತ್ಯಾಕಾಂಡ ನಡೆದಿತ್ತು. ಅಯೋಧ್ಯೆಯಿಂದ ಕರಸೇವಕರು ಬರುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್‌ಗೆ ಬೆಂಕಿ ಹಚ್ಚಿದ್ದರಿಂದ 58 ಜನ ಮೃತಪಟ್ಟಿದ್ದರು. ಈ ಹತ್ಯಾಕಾಂಡವು ವಿಭಜನೆಯ ನಂತರ ಭಾರತದಲ್ಲಿ ನಡೆದ ಅತ್ಯಂತ ಕೆಟ್ಟ ಕೋಮು ಗಲಭೆಗೆ ಕಾರಣವಾಗಿತ್ತು.
2011ರ ಮಾರ್ಚ್ನಲ್ಲಿ ವಿಚಾರಣಾ ನ್ಯಾಯಾಲಯವು 31 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿತ್ತು. ಇದರಲ್ಲಿ 11 ಅಪರಾಧಿಗಳಿಗೆ ಮರಣದಂಡನೆ ಮತ್ತು ಉಳಿದ 20 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು. ಇತರ 63 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. 2017ರಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು. ಇತರ 20 ಅಪರಾಧಿಗಳಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಈ ಅಪರಾಧಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿದ್ದು, 2018ರಿಂದ ಬಾಕಿ ಉಳಿದಿವೆ. ಇದೀಗ ಅಪರಾಧಿಗಳ ಜೈಲುವಾಸದ ಅವಧಿ (17-18 ವರ್ಷಗಳು) ಮತ್ತು ಅಪರಾಧದಲ್ಲಿ ಅವರ ವೈಯಕ್ತಿಕ ಪಾತ್ರಗಳನ್ನು ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯವು ಎಂಟು ಜನರಿಗೆ ಜಾಮೀನು ನೀಡಿದೆ. ಸೆಷನ್ಸ್ ನ್ಯಾಯಾಲಯವು ವಿಧಿಸಬಹುದಾದ ಅಂತಹ ಷರತ್ತುಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯ ಪೀಠವು ಆದೇಶಿಸಿದೆ.
ನಾಲ್ವರಿಗೆ ಜಾಮೀನು ನೀಡಲು ಆಕ್ಷೇಪ: ಆದರೆ, ಇತರ ನಾಲ್ವರು ಅಪರಾಧಿಗಳ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯ ಪೀಠ, ಈ ಹಂತದಲ್ಲಿ ಅವರಿಗೆ ಜಾಮೀನು ನೀಡಲು ಸಿದ್ಧವಿಲ್ಲ ಎಂದು ಹೇಳಿದೆ. ಈ ನಾಲ್ವರು ವ್ಯಕ್ತಿಗಳು ಅಪರಾಧದಲ್ಲಿ ನಿರ್ದಿಷ್ಟ ಪಾತ್ರಗಳನ್ನು ವಹಿಸಿರುವುದು ಕಂಡುಬಂದಿದ್ದರಿಂದ ಜಾಮೀನು ನೀಡಬಾರದು ಎಂದು ಸಾಲಿಸಿಟರ್ ಜನರಲ್ ವಾದಿಸಿದ್ದಾರೆ. ಇವರಲ್ಲಿ ಒಬ್ಬ ಕಬ್ಬಿಣದ ಪೈಪ್ ಸಮೇತ ಸಿಕ್ಕಿಬಿದ್ದರೆ, ಇನ್ನೊಬ್ಬ ಗುಜರಾತಿಯಲ್ಲಿ 'ಧಾರಿಯಾ' ಎಂದು ಕರೆಯಲ್ಪಡುವ ಕುಡುಗೋಲು ತರಹದ ಆಯುಧವನ್ನು ಹೊತ್ತೊಯ್ಯುತ್ತಿದ್ದ. ಮತ್ತೊಬ್ಬ ಅಪರಾಧಿಯು ಕೋಚ್ ಅನ್ನು ಸುಡಲು ಬಳಸಲಾದ ಪೆಟ್ರೋಲ್ ಖರೀದಿಸಿ, ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇನ್ನೊಬ್ಬ ಅಪರಾಧಿ ಪ್ರಯಾಣಿಕರ ಮೇಲೆ ದಾಳಿ ಮಾಡಿ, ಲೂಟಿ ಮಾಡಿದ್ದಾನೆ ಎಂದು ಸಾಲಿಸಿಟರ್ ಜನರಲ್ ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಮುಂಬರುವ ಈದ್ ಅಲ್-ಫಿತರ್ ಹಬ್ಬವನ್ನು ಉಲ್ಲೇಖಿಸಿ ಅಪರಾಧಿಗಳಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಸಾಲಿಸಿಟರ್ ಜನರಲ್ ಅವರು ಜಾಮೀನಿಗೆ ವಿರೋಧಿಸಿರುವ ನಾಲ್ವರು ಅಪರಾಧಿಗಳ ವಿಚಾರಣೆಯನ್ನು ಎರಡು ವಾರಗಳ ಮುಂದೂಡಬೇಕೆಂದು ಹೇಳಿದರು. ಆದರೆ, ಈ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಬೇಕೆಂದು ಸಾಲಿಸಿಟರ್ ಜನರಲ್ ಒತ್ತಾಯಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠವು ನಾಲ್ವರ ಜಾಮೀನು ಅರ್ಜಿಗಳನ್ನು ಪರಿಗಣಿಸಲು ನಿರಾಕರಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇನ್ನೊಬ್ಬ ಅಪರಾಧಿಗೆ ಜಾಮೀನು ನೀಡಿತ್ತು.
ಇದನ್ನೂ ಓದಿ:2002ರ ನರೋಡಾ ಹತ್ಯಾಕಾಂಡ: ಮಾಯಾ ಕೊಡ್ನಾನಿ ಸೇರಿ ಎಲ್ಲ 67 ಆರೋಪಿಗಳು ಖುಲಾಸೆ