ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉನ್ನತಾಧಿಕಾರ ಸಮಿತಿಯಿಂದ ತುರ್ತು ಪೆರೋಲ್ ಪಡೆದ ಎಲ್ಲಾ ಕೈದಿಗಳು 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶವು ಕೋವಿಡ್ ಸಾಂಕ್ರಾಮಿಕದ ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ, ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ತಾನು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ನೀಡಿದ್ದ ಹಿಂದಿನ ನಿರ್ದೇಶನಗಳ ಮುಂದುವರಿದ ಭಾಗವಾಗಿದೆ.
ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ತುರ್ತು ಪೆರೋಲ್ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿಚಾರಣಾಧೀನ ಕೈದಿಗಳು ಮತ್ತು ಅಪರಾಧಿಗಳು 15 ದಿನಗಳೊಳಗೆ ಸಂಬಂಧಪಟ್ಟ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ. ಕೈದಿಗಳು ಶರಣಾದ ನಂತರ, ಅವರು ಸಕ್ಷಮ ನ್ಯಾಯಾಲಯದ ಮುಂದೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅವರ ಅರ್ಜಿಗಳನ್ನು ಕಾನೂನಿನ ಪ್ರಕಾರ ಪರಿಗಣಿಸಲಾಗುವುದು ಎಂದು ಪೀಠವು ತಿಳಿಸಿದೆ. ಅಂತೆಯೇ, ತುರ್ತು ಪೆರೋಲ್ ಮೇಲೆ ಬಿಡುಗಡೆಯಾದ ಅಪರಾಧಿಗಳು ತಮ್ಮ ಮೇಲ್ಮನವಿಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸಲು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆ ತೀರಾ ಜೋರಾಗಿದ್ದ ಅವಧಿಯಲ್ಲಿ ದೇಶದ ಹಲವಾರು ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜೈಲುಗಳಲ್ಲಿ ಕೂಡ ಕೋವಿಡ್ ವ್ಯಾಪಕವಾಗಿ ಹರಡಲಾರಂಭಿಸಿತ್ತು. ಹೀಗಾಗಿ ಸಾಧ್ಯವಾದಷ್ಟು ಕೈದಿಗಳನ್ನು ಬಿಡುಗಡೆ ಮಾಡಿ ಜೈಲುಗಳಲ್ಲಿನ ದಟ್ಟಣೆ ಕಡಿಮೆ ಮಾಡುವುದು ಆಗ ಬಹಳ ಅಗತ್ಯವಾಗಿತ್ತು. ಇದಕ್ಕಾಗಿ ಸುಪ್ರೀಂ ಕೋರ್ಟ್ ತಾನಾಗಿಯೇ ಮಧ್ಯಪ್ರವೇಶಿಸಿತ್ತು.