ನವದೆಹಲಿ:ಕಾನೂನಿನಡಿ32 ವಾರಗಳ ಗರ್ಭಪಾತಕ್ಕೆ ಅವಕಾಶವಿದ್ದರೂ, ವಿವಾಹಿತ ಮಹಿಳೆಯೊಬ್ಬರು 26 ವಾರಗಳ ಗರ್ಭಪಾತಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿತು. ಮಹಿಳೆಗೆ ತಜ್ಞ ವೈದ್ಯರ ನಿಗಾದಲ್ಲಿ ಸುರಕ್ಷಿತ ಗರ್ಭಧಾರಣೆ ಮತ್ತು ಹೆರಿಗೆ ಮಾಡಿಸಲು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿತು. ವೈದ್ಯಕೀಯವಾಗಿ ಗರ್ಭದಲ್ಲಿರುವ ಮಗುವನ್ನು ಹರಣ ಮಾಡಲು ಅನುಮತಿ ನೀಡಲಾಗುವುದಿಲ್ಲ. ಮಗು ಪೂರ್ಣವಾಗಿ ಬೆಳವಣಿಗೆ ಹೊಂದದೆಯೇ ಹೆರಿಗೆ ಮಾಡುವ ಆಯ್ಕೆಯನ್ನೂ ನಿರಾಕರಿಸಿತು. ಇದಲ್ಲದೇ, ತಾಯಿ ಬಯಸಿದಲ್ಲಿ ಶಿಶು ಹುಟ್ಟಿದ ನಂತರ ಅದನ್ನು ಸರ್ಕಾರದ ಸುಪರ್ದಿಗೆ ವಹಿಸಬಹುದು ಎಂದು ಪೀಠ ಹೇಳಿದೆ.
ಸಂವಿಧಾನದ 142ನೇ ವಿಧಿಯ ಅನುಸಾರ ಮಹಿಳೆ ಗರ್ಭಪಾತದ ಹಕ್ಕನ್ನು ಹೊಂದಿದ್ದಾಳೆ. ಆದರೆ, ಅದು ವಿಶೇಷ ಪ್ರಕರಣಗಳಲ್ಲಿ ಮಾತ್ರ. ಎಲ್ಲ ಕೇಸ್ಗಳಿಗೆ ಇದು ಅನ್ವಯವಾಗುವುದಿಲ್ಲ. ಮಹಿಳೆಯು ಯಾವುದೇ ಗಂಭೀರ ಸಮಸ್ಯೆ ಹೊಂದಿಲ್ಲ. ಆದಾಗ್ಯೂ ಮೂರನೇ ಮಗು ಬೇಡ ಎಂಬ ಕಾರಣಕ್ಕಾಗಿ, ಜನಿಸಬೇಕಿರುವ ಮಗುವನ್ನು ಕಾನೂನಿನಡಿ ಹತ್ಯೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
ಗರ್ಭಪಾತಕ್ಕೆ ನಿರಾಕರಿಸಿದ್ದೇಕೆ?:26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯಾಗಿರುವ ವಿವಾಹಿತ ಮಹಿಳೆಯ ಭ್ರೂಣದಲ್ಲಿ ಯಾವುದೇ ಅಸಹಜತೆ ಇದೆಯೇ ಎಂದು ಪರೀಕ್ಷಿಸಲು ಏಮ್ಸ್ ವೈದ್ಯಕೀಯ ಮಂಡಳಿಗೆ ಕೋರ್ಟ್ ಈ ಹಿಂದಿನ ವಿಚಾರಣೆಯಲ್ಲಿ ಸೂಚಿಸಿತ್ತು. ಮಹಿಳೆಯು ಖಿನ್ನತೆ ಮತ್ತು ಪ್ರಸವಾನಂತರದ ಮನೋರೋಗದಿಂದ ಬಳಲುತ್ತಿರುವ ಬಗ್ಗೆಯೂ ಪರೀಕ್ಷೆ ನಡೆಸಿ ವರದಿ ನೀಡಲು ಹೇಳಿತ್ತು.
ಅರ್ಜಿದಾರೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಪರೀಕ್ಷೆ ನಡೆಸಲು AIIMSಗೆ ಸ್ವಾತಂತ್ರ್ಯವಿದೆ ಎಂದು ಹೇಳಿರುವ ಕೋರ್ಟ್, ಏಮ್ಸ್ ವೈದ್ಯಕೀಯ ಮಂಡಳಿಯ ಮುಂದೆ ಮಹಿಳೆ ಹಾಜರಾಗುವಂತೆಯೂ ತಾಕೀತು ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಅರ್ಜಿದಾರೆಯ ವಾದವೇನು?:2022 ರಿಂದ ಪ್ರಸವಾನಂತರದ ಮನೋರೋಗಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರ್ಜಿದಾರೆ ಪರ ವಕೀಲರು, ವೈದ್ಯರು ನೀಡಿದ ಔಷಧಿ ಚೀಟಿಗಳನ್ನು ಕೋರ್ಟ್ಗೆ ಸಲ್ಲಿಸಿದರು. ಇದನ್ನು ನೋಡಿದ ನ್ಯಾಯಪೀಠ ಯಾವ ಕಾಯಿಲೆಗೆ ಔಷಧಗಳನ್ನು ನೀಡಲಾಯಿತು. ಎಲ್ಲಾ ಪ್ರಿಸ್ಕ್ರಿಪ್ಷನ್‌ಗಳು ಕಾಯಿಲೆಯ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸಿಲ್ಲವಲ್ಲ ಎಂದು ಮರುಪ್ರಶ್ನೆ ಮಾಡಿತು. ಈ ಕುರಿತು ಏಮ್ಸ್ ವೈದ್ಯರ ಅಭಿಪ್ರಾಯವೂ ಮುಖ್ಯವಾಗಿದೆ. ಭ್ರೂಣವು ಯಾವುದೇ ಅಸಹಜತೆಯಿಂದ ಬಳಲುತ್ತಿದೆಯೇ? ವೈದ್ಯರು ನೀಡಿದ ಔಷಧಿಗಳಿಂದ ಪೂರ್ಣಾವಧಿಯ ಗರ್ಭಾವಸ್ಥೆಗೆ ಅಪಾಯ ತರುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಲು ಸೂಚಿಸಿದೆ.
ಇದನ್ನೂ ಓದಿ:ಮಗುವಿಗೂ ಜನಿಸುವ ಹಕ್ಕಿದೆ, ಕಾನೂನಿನಡಿ ಕೊಲ್ಲಲು ಸಾಧ್ಯವಿಲ್ಲ: ಗರ್ಭಪಾತ ಕೇಸಲ್ಲಿ ಸುಪ್ರೀಂ ಕೋರ್ಟ್ ಅಭಿಮತ