ನವದೆಹಲಿ: 26 ವಾರಗಳಲ್ಲಿ ಗರ್ಭಪಾತದ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ವಿಭಿನ್ನ ತೀರ್ಪು ನೀಡಿದೆ. ಇಬ್ಬರು ನ್ಯಾಯಮೂರ್ತಿಗಳು ಪ್ರಕರಣದ ಬಗ್ಗೆ ವಿಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉನ್ನತ ಪೀಠಕ್ಕೆ ಶಿಫಾರಸು ಮಾಡಲಾಗಿದೆ. ಈ ಪ್ರಕರಣವನ್ನು ವಿಸ್ತೃತ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಬೇಕಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿವಿ ನಾಗರತ್ನ ದ್ವಿಸದಸ್ಯ ಪೀಠವು ಪ್ರಕರಣದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿತ್ತು. ಇದರಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಅವರು, ಭ್ರೂಣದ ಉಳಿವಿನ ಕುರಿತು ಏಮ್ಸ್‌ನ ವೈದ್ಯಕೀಯ ತಂಡ ನೀಡಿದ ವರದಿಯ ಪ್ರಕಾರ ನೋಡುವುದಾದರೇ ಮಹಿಳೆಗೆ ಗರ್ಭಪಾತ ಮಾಡಲು ಅನುಮತಿಸುವುದಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆದರೇ ಮತ್ತೊಬ್ಬ ನ್ಯಾಯಮೂರ್ತಿಗಳಾದ ನಾಗರತ್ನ ಅವರು, ಮಹಿಳೆಗೆ ಗರ್ಭಪಾತಕ್ಕೆ ಅವಕಾಶ ನೀಡಿರುವ ಅಕ್ಟೋಬರ್ 9ರ ಸುಪ್ರೀ ಆದೇಶ ಸಂಪೂರ್ಣ ಸರಿಯಾಗಿದ್ದು, ಅದನ್ನು ಹಿಂಪಡೆಯುವ ಅಗತ್ಯವಿಲ್ಲ ಹಾಗೂ ಇದರಲ್ಲಿ ಮಧ್ಯಪ್ರವೇಶದ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಗು ಬದುಕುಳಿಯುವ ಸಾಧ್ಯತೆಗಳಿಗಿಂತ ಗರ್ಭಿಣಿಯ ಇಚ್ಛೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಮಹಿಳೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ, ಎರಡನೇ ಮಗುವಿಗೆ ಕೇವಲ ಒಂದು ವರ್ಷ. ಆಕೆಯ ಆರ್ಥಿಕ ಪರಿಸ್ಥಿತಿಯ ಸರಿಯಿಲ್ಲ. ಈಗಾಗಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಅವರು ಅದಕ್ಕಾಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೂರನೇ ಮಗುವನ್ನು ಹೊಂದಲು ಬಯಸುವುದಿಲ್ಲ ಎಂದು ಪದೇ ಪದೇ ಪುನರುಚ್ಚರಿಸಿದ್ದಾರೆ. ಹಾಗಾಗಿ ಮಹಿಳೆಯ ಆಶಯ ಹಾಗೂ ಭಾವನೆಯನ್ನು ಗೌರವಿಸಬೇಕು ಎಂದು ನಾಗರತ್ನಾ ಅವರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಗರ್ಭಪಾತಕ್ಕೆ ಅವಕಾಶ ಕೋರಿ ಮಹಿಳೆ ಸುಪ್ರೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 9 (ಸೋಮವಾರ) ದಂದು ಎರಡು ಮಕ್ಕಳ ತಾಯಿಯಾಗಿರುವ ಈ ಮಹಿಳೆಗೆ ಗರ್ಭಪಾತ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಮಹಿಳೆ ಈಗಾಗಲೇ ಖಿನ್ನತೆಯಿಂದ ಬಳಲುತ್ತಿದ್ದು, ಮೂರನೇ ಮಗುವನ್ನು ಬೆಳೆಸಲು ಆಕೆ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸಿದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಅನಗತ್ಯ ಗರ್ಭಧಾರಣೆಯನ್ನು ಹೊಂದಲು ಅವಳನ್ನು ಒತ್ತಾಯಿಸಲಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.
ಆದರೆ, ಈ ಮೊದಲು ಸುಪ್ರೀಂ ಕೋರ್ಟ್ ನೀಡಿದ್ದ ತನ್ನ ಆದೇಶವನ್ನು ಹಿಂಪಡೆಯುವಂತೆ ಕೋರಿ ಕೇಂದ್ರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಆದರೆ, ಈ ವೇಳೆ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿರುವುದರಿಂದ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ:'ಮದುವೆ ಧರ್ಮನಿಷ್ಠ, ಆಧ್ಯಾತ್ಮಿಕ ಬಂಧ': ವಿವಾಹ ವಿಚ್ಚೇದನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವ್ಯಾಖ್ಯಾನ