ನವದೆಹಲಿ :ಜ್ಞಾನವ್ಯಾಪಿ ಮಸೀದಿ ವಿವಾದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಯೋಧ್ಯೆ ರಾಮ ಮಂದಿರ ತೀರ್ಪಿನ ನಂತರ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ವುಡು ಮಾಡಲು ವ್ಯವಸ್ಥೆ ಮಾಡಿಕೊಡುವಂತೆ ಕೋರಿ ಜ್ಞಾನವ್ಯಾಪಿ ಮಸೀದಿ ಸಮಿತಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ವಾರಾಣಾಸಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ಕರೆಯುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಜಿಲ್ಲಾಧಿಕಾರಿಗೆ ಸೋಮವಾರ ಸೂಚಿಸಿದ್ದಾರೆ.
ನ್ಯಾ.ಪಿ.ಎಸ್ ನರಸಿಂಹ ಮತ್ತು ನ್ಯಾ.ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಸಭೆಯಲ್ಲಿ ಕೈಗೊಂಡ ಒಮ್ಮತದ ನಿರ್ಧಾರದ ಮೇಲೆ ನ್ಯಾಯಾಲಯವು ಏಪ್ರಿಲ್ 21ರ ಶುಕ್ರವಾರದಂದು ಸೂಕ್ತ ಆದೇಶಗಳನ್ನು ನೀಡಲಿದೆ ಎಂದು ಹೇಳಿದ್ದಾರೆ.
ಅಂಜುಮನ್ ಇಂತೇಜಾಮಿಯಾ ಮಸೀದಿಯ ಪರ ಹಿರಿಯ ವಕೀಲ ಹುಸೇಫಾ ಅಹ್ಮೆದಿ ಅವರು, ಮುಸ್ಲಿಮರು ಇಲ್ಲಿನ ಫೌಂಟೇನ್ ಪ್ರದೇಶ ಮತ್ತು ಹತ್ತಿರದ ವಾಶ್‌ರೂಮ್‌ಗಳಲ್ಲಿ ತಮ್ಮ ವುಡು ಮಾಡಲು ಅವಕಾಶ ಕಲ್ಪಿಸುವಂತೆ ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಕಳೆದ ವರ್ಷ ವಿವಾದಿತ ಸ್ಥಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ವುಡು ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸಲು ಮುಸ್ಲಿಮರ ಹಕ್ಕನ್ನು ನಿರ್ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು ಎಂದು ವಕೀಲ ಅಹ್ಮದಿ ಇದೇ ವೇಳೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಪರವಾಗಿ ವಾದ ಮಂಡಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಒಂದು ಗುಂಪು ಇಲ್ಲಿ ಕಾರಂಜಿ ಇರುವುದಾಗಿ ಹೇಳಿದೆ, ಇನ್ನೊಂದು ಗುಂಪು ಶಿವಲಿಂಗ ಎಂದು ವಾದಿಸುತ್ತಿವೆ. ಇದು ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನಾವು ಮುಸ್ಲಿಮರಿಗೆ ವುಜು ಮಾಡಲು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಹೇಳಿದರು.