ನವದೆಹಲಿ:ಬಲವಂತದ ಧಾರ್ಮಿಕ ಮತಾಂತರ "ಗಂಭೀರ ವಿಷಯ" ಮತ್ತು ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಮತಾಂತರ ವಿರೋಧಿ ಕಾನೂನುಗಳ ಕುರಿತು ರಾಜ್ಯ ಸರ್ಕಾರಗಳಿಂದ ಮಾಹಿತಿ ಸಂಗ್ರಹಿಸಿ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೇಂದ್ರದ ಅಟಾರ್ನಿ ಜನರಲ್ರಿಗೆ ಈ ವಿಷಯವಾಗಿ ಸಲಹೆಗಳನ್ನು ನೀಡಲು ಕೋರಿದೆ.
ಬಲವಂತದ ಧಾರ್ಮಿಕ ಮತಾಂತರ ಗಂಭೀರ ಮತ್ತು ಮಹತ್ವದ ವಿಚಾರವಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಸೂಕ್ತ ಸಲಹೆ ಮತ್ತು ಮಾಹಿತಿ ನೀಡಿ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಲ್ಲಿ ಕೋರ್ಟ್ ಕೋರಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಲು ಸಹಾಯ ಮಾಡುವಂತೆ ಹೇಳಿದೆ.
ಬೆದರಿಕೆ, ಉಡುಗೊರೆಗಳು ಮತ್ತು ಆರ್ಥಿಕ ನೆರವಿನ ಹೆಸರಿನಲ್ಲಿ ಮೋಸದ ಮೂಲಕ ಬಲವಂತದ ಧಾರ್ಮಿಕ ಮತಾಂತರದ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಯುತ್ತಿದೆ.
ವಿವರವಾದ ಮಾಹಿತಿಗೆ ಸಮಯ ಬೇಕು:ಕಳೆದ ವಿಚಾರಣೆಯಲ್ಲಿ ರಾಜ್ಯಗಳಿಂದ ಧಾರ್ಮಿಕ ಮತಾಂತರದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠದ ಮುಂದೆ ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲು ಸಮಯ ಕೋರಿದ್ದರು.
ಬಲವಂತದ ಮತಾಂತರದ ಬಗ್ಗೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದು ವಾರದ ಸಮಯ ನೀಡಿ ಎಂದು ಕೇಂದ್ರ ಕೇಳಿತ್ತು. ನಂಬಿಕೆಯ ಆಧಾರದ ಮೇಲೆ ವ್ಯಕ್ತಿಗಳು ಮತಾಂತರಗೊಳ್ಳುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು ಅಥವಾ ಅವರನ್ನು ಆಮಿಷಗಳಿಗೆ ಬಲಿಪಡಿಸಿ ಬದಲಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದನ್ನು ಶಾಸನಬದ್ಧವಾಗಿ ನಿಯಂತ್ರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಕೇಂದ್ರ ಹೇಳಿತ್ತು.