ನವದೆಹಲಿ: ಅವಿವಾಹಿತ 20 ವರ್ಷದ ಯುವತಿಯ 29 ವಾರಗಳ ಗರ್ಭಪಾತಯನ್ನು ಸುರಕ್ಷಿತವಾಗಿ ನಡೆಸಬಹುದೇ ಎಂದು ಪರಿಶೀಲಿಸುವ ಕುರಿತು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಈ ಸಂಬಂಧ ಜನವರಿ 20ರೊಳಗೆ ವೈದ್ಯರ ತಂಡವನ್ನು ರಚಿಸುವಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕರಿಗೆ ನಿರ್ದೇಶನ ನೀಡಿರುವ ಸರ್ವೋಚ್ಛ ನ್ಯಾಯಾಲಯವು ಯುವತಿಯ ವೈದ್ಯಕೀಯ ಪರೀಕ್ಷೆಯ ನಂತರ ವರದಿ ಸಲ್ಲಿಸುವಂತೆ ಏಮ್ಸ್ ಅಧಿಕಾರಿಗಳಿಗೆ ಸೂಚಿಸಿದೆ.
20 ವರ್ಷದ ಬಿಟೆಕ್ ವಿದ್ಯಾರ್ಥಿನಿಯ ಗರ್ಭಪಾತ ಮಾಡಿಸುವ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ನಡೆಸಿತು. ಈ ವೇಳೆ, ಸುಮಾರು 29 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಬಯಸುವುದಾಗಿ ವಿದ್ಯಾರ್ಥಿನಿಯ ಪರ ಹಾಜರಾದ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ:24 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡಿದ ಸುಪ್ರೀಂ..'ಸುರಕ್ಷತೆಯ ಅಂಶ' ಅಧ್ಯಯನಕ್ಕೆ AIIMSಗೆ ನಿರ್ದೇಶನ
ಈ ಸಂದರ್ಭದಲ್ಲಿ ನ್ಯಾಯಪೀಠವು ಅರ್ಜಿದಾರರನ್ನು ಏಮ್ಸ್ ವೈದ್ಯಕೀಯ ಮಂಡಳಿಯಿಂದ ಪರಿಶೀಲನೆ ಮಾಡುವಂತೆ ಆದೇಶಿಸುವುದು ಸೂಕ್ತ. ಅರ್ಜಿದಾರರ ಜೀವಕ್ಕೆ ಯಾವುದೇ ತೊಂದರೆಯಿಲ್ಲದೇ ಗರ್ಭಪಾತವನ್ನು ನಡೆಸಬಹುದೇ ಎಂದು ಪರಿಗಣಿಸಲು ಜನವರಿ 20ರೊಳಗೆ ವೈದ್ಯಕೀಯ ತಂಡವನ್ನು ರಚಿಸುವಂತೆ ನಿರ್ದೇಶಕರಿಗೆ ನಿರ್ದೇಶಿಸಲಾಗುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಈ ಆದೇಶವನ್ನು ಏಮ್ಸ್ ನಿರ್ದೇಶಕರ ಗಮನಕ್ಕೆ ತರುವಂತೆಯೂ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿದೆ. ಏಮ್ಸ್ ವರದಿಯನ್ನು ಪರಿಶೀಲಿಸಿದ ನಂತರ ಜನವರಿ 23ರಂದು ತನ್ನ ಆದೇಶ ನೀಡುವುದಾಗಿಯೂ ಹೇಳಿದೆ. ಇದೇ ವೇಳೆ, ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೂ ಅವರನ್ನು ನ್ಯಾಯ ಪೀಠ ಕೇಳಿದೆ.
ಪ್ರಕರಣದ ಹಿನ್ನೆಲೆ:ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವ ಬಿಟೆಕ್ ವಿದ್ಯಾರ್ಥಿನಿ ಸುಮಾರು 29 ವಾರಗಳ ಗರ್ಭಿಣಿಯಾಗಿದ್ದಾರೆ. ತನ್ನ ಗರ್ಭಾವಸ್ಥೆಯ 28ನೇ ವಾರದಲ್ಲಿ ಈ ವಿದ್ಯಾರ್ಥಿನಿ ಅಸ್ವಸ್ಥಳಾಗಿದ್ದರು. ಹೀಗಾಗಿಯೇ ವೈದ್ಯರ ಬಳಿಗೆ ಹೋದಾಗ ಆಕೆ ಗರ್ಭಿಣಿ ಎಂದು ದೃಢಪಟ್ಟಿತ್ತು. ಆದರೆ, ಈ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ವಿದ್ಯಾರ್ಥಿನಿ ಬಯಸಿ ವಕೀಲರ ಮೂಲಕ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಗರ್ಭಪಾತ ಮಾಡುವ ಹಕ್ಕಿದೆ ಎಂದಿದ್ದ ಸುಪ್ರೀಂ:ಗರ್ಭಪಾತದ ವಿಷಯವಾಗಿಈ ಹಿಂದೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿರುವುದನ್ನು ಗಮನಿಸಬಹುದಾಗಿದೆ. ದೇಶದ ಎಲ್ಲ ಮಹಿಳೆಯರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಮಾಡುವ ಹಕ್ಕಿದೆ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿತ್ತು. ಅಲ್ಲದೇ, ಗರ್ಭಪಾತ ಕಾನೂನಿನ ಅಡಿಯಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿತ್ತು.
ಈ ಮೂಲಕ ಅವಿವಾಹಿತ ಮಹಿಳೆಯರು ಸಹ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕನ್ನು ಸುಪ್ರೀಂಕೋರ್ಟ್ ನೀಡಿತ್ತು. ಈ ಮೊದಲು ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳಿಗಿಂತ ಹೆಚ್ಚು ಮತ್ತು 24 ವಾರಗಳಿಗಿಂತ ಕಡಿಮೆ ಅವಧಿಯ ಗರ್ಭಪಾತದ ಹಕ್ಕು ಇದುವರೆಗೆ ವಿವಾಹಿತ ಮಹಿಳೆಯರಿಗೆ ಮಾತ್ರ ಇತ್ತು. ಇದೇ ವೇಳೆ ಗರ್ಭಪಾತದ ಉದ್ದೇಶಗಳಿಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಸಹ ಅಪರಾಧವೆಂದು ಪರಿಗಣಿಸಲಾಗುವುದು ಎಂದೂ ಹೇಳಿತ್ತು.
ಇದನ್ನೂ ಓದಿ:ಎಲ್ಲ ಮಹಿಳೆಯರಿಗೆ ಗರ್ಭಪಾತದ ಹಕ್ಕಿದೆ, ವೈವಾಹಿಕ ಅತ್ಯಾಚಾರವೂ ಅಪರಾಧ: ಸುಪ್ರೀಂ ಕೋರ್ಟ್