ಕರ್ನಾಟಕ

karnataka

ETV Bharat / bharat

ವಿವಾಹ ನೋಂದಣಿಗೆ ಒಟ್ಟಿಗೆ ಆಗಮಿಸಲು ಸಾಧ್ಯವಾಗದ ದಂಪತಿಗೆ ಗುಡ್​ನ್ಯೂಸ್​ ಕೊಟ್ಟ ಸುಪ್ರೀಂಕೋರ್ಟ್‌ - ವಿವಾಹ ನೋಂದಣಿ ಸಂಬಂಧ ಕಾನೂನು

ದೈಹಿಕ ಉಪಸ್ಥಿತಿ ಇಲ್ಲದೆಯೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿವಾಹ ನೋಂದಣಿ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

Special Marriage Act
ದಂಪತಿಗೆ ಗುಡ್​ನ್ಯೂಸ್​ ಕೊಟ್ಟ ಸುಪ್ರೀಂ

By

Published : Aug 12, 2021, 11:12 AM IST

ನವದೆಹಲಿ:ನವಜೋಡಿಗಳ ದೈಹಿಕ ಉಪಸ್ಥಿತಿ ಇಲ್ಲದೆಯೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿವಾಹ ನೋಂದಣಿ ಮಾಡಲು ವಿಶೇಷ ವಿವಾಹ ಕಾಯ್ದೆಯಡಿ ಅನುಮತಿ ನೀಡಿ ಸುಪ್ರೀಂಕೋರ್ಟ್​ ಆದೇಶಿಸಿದೆ. ಕಾನೂನು, ತಂತ್ರಜ್ಞಾನ ಬೆಳೆಯುತ್ತಿದೆ. ಅವುಗಳಿಗೆ ಸರಿಸಮಾನವಾಗಿ ನಾವು ನಡೆಯಬೇಕು ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಮತ್ತು ವಿ.ರಾಮಸುಬ್ರಮಣ್ಯನ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿತು. ವಿಶೇಷ ಕಾನೂನಿನ ಅಡಿಯಲ್ಲಿ, ಓರ್ವ ದಂಪತಿಗೆ ದೂರದಲ್ಲಿದ್ದುಕೊಂಡು ಸಾಕ್ಷ್ಯ ಹೇಳಲು ಅನುವು ಮಾಡಿಕೊಟ್ಟ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ ತೀರ್ಪು ಪ್ರಶ್ನಿಸಿ ಹರಿಯಾಣ ಸರ್ಕಾರ ಈ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್​ ಈ ತೀರ್ಪು ನೀಡಿದೆ.

"ಕಷ್ಟದ ಸಮಯದಲ್ಲಿ ಕಾನೂನು ಕಟ್ಟಲೆಗಳನ್ನು ಅನುಸರಿಸಲು ಅಸಾಧ್ಯ ಎನ್ನುವಷ್ಟು ಕಠಿಣವಾಗಿರಬಾರದು. ಅದಲ್ಲದೆ ನೋಂದಣಿ ವಿಭಾಗ ಇರುವುದು ಜನರ ಅನುಕೂಲಕ್ಕಾಗಿಯೇ ಹೊರತು ಅಡಚಣೆ ಅಥವಾ ಅಡೆತಡೆಗಳನ್ನು ಸೃಷ್ಟಿಸಲು ಅಲ್ಲ" ಎಂದು ಸ್ಪಷ್ಟವಾಗಿ ಉಚ್ಛರಿಸಿದೆ. ಇನ್ನು ಹರಿಯಾಣ ಸರ್ಕಾರಕ್ಕೆ 45 ದಿನಗಳ ಒಳಗೆ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ನಿರ್ದೇಶನ ನೀಡಿದೆ.

ಈ ಆದೇಶಕ್ಕೆ ಕಾರಣವಾದ ಪ್ರಕರಣ..

ಯುವಕ ಯುಕೆಯಲ್ಲಿ ಮತ್ತು ಯುವತಿ ಅಮೆರಿಕಾದಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರಿಬ್ಬರು 2019ರ ಡಿಸೆಂಬರ್​ ತಿಂಗಳಿನಲ್ಲಿ ಭಾರತದಲ್ಲಿ ಮದುವೆಯಾಗಿ ಆ ಬಳಿಕ ತಮ್ಮ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ವಿವಾಹ ನೋಂದಣಿ ಅಧಿಕಾರಿಯು ಪತಿ-ಪತ್ನಿ 2020ರ ಏಪ್ರಿಲ್ 3ರಂದು ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ. ಆದರೆ ಕೋವಿಡ್ -19 ಕಾರಣದಿಂದ ಎಲ್ಲಾ ವಿಮಾನಗಳು ರದ್ದಾಗಿದ್ದು, ದಂಪತಿಗೆ ಆಗಮಿಸಲು ಸಾಧ್ಯವಾಗಿಲ್ಲ.ಹೀಗಾಗಿ 2020ರ ಆಗಸ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಾವಣೆ ಪ್ರಕ್ರಿಯೆ ನಡೆಸಿಕೊಡುವಂತೆ ಆ ದಂಪತಿ ಮನವಿ ಸಲ್ಲಿಸಿದ್ದಾರೆ. ಆದರೆ ವಿವಾಹ ನೋಂದಾವಣಿ ಅಧಿಕಾರಿ ಮನವಿಯನ್ನು ನಿರಾಕರಿಸಿದ್ದರು.

ಬಳಿಕ ಹೈಕೋರ್ಟ್​ ಮೆಟ್ಟಿಲೇರಿದ ದಂಪತಿ ವಿವಾಹ ಪ್ರಮಾಣಪತ್ರವಿಲ್ಲದೆ ಯುಎಸ್‍ನಲ್ಲಿರುವ ತನ್ನ ಪತ್ನಿ ಭೇಟಿಯಾಗಲು ಸಾಧ್ಯವಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಾವಣೆ ಪ್ರಕ್ರಿಯೆ ನಡೆಸಿಕೊಡಲು ಅನುಮತಿ ನೀಡುವಂತೆ ಪತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಂಪತಿ ಮತ್ತು ಇಬ್ಬರು ಸಾಕ್ಷಿಗಳ ದೈಹಿಕ ಉಪಸ್ಥಿತಿ ಇಲ್ಲದೆ ವಿವಾಹ ನೋಂದಣಿ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ ಎಂದು ಏಕ-ನ್ಯಾಯಾಧೀಶರಿದ್ದ ಪೀಠವು ಡಿಸೆಂಬರ್‌ನಲ್ಲಿ ತೀರ್ಪು ನೀಡಿ ಅರ್ಜಿಯನ್ನು ವಜಾಗೊಳಿಸಿತು.

ಆ ಬಳಿಕ ದಂಪತಿ ಮತ್ತೆ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೆಟ್ಟಿಲೇರಿದರು. ಆಗ ನ್ಯಾಯಪೀಠವು "ಪತ್ನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ಪತಿ ಇಬ್ಬರು ಸಾಕ್ಷಿಗಳ ಜೊತೆ ಹಾಜರಾದರೆ ಕಾನೂನಿನ ಉಲ್ಲಂಘನೆಯಾಗುವುದಿಲ್ಲ" ಎಂದು ತೀರ್ಪು ನೀಡಿತು. ಆದರೆ ಮದುವೆ ನೋಂದಾವಣೆಗೆ ದಂಪತಿಯ ಸಹಿಯ ಅಗತ್ಯವಿದೆ ಎಂದು ಹೇಳಿ ಹರಿಯಾಣ ಸರ್ಕಾರವು ಆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ ಸುಪ್ರೀಂ ಪೀಠವು ದಂಪತಿಗೆ ಅನುಮತಿ ನೀಡಿ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

ABOUT THE AUTHOR

...view details