ನವದೆಹಲಿ: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಅಲ್ಲದೇ, ಒಂದು ವಾರದಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸವೋಚ್ಛ ನ್ಯಾಯಾಲಯ ಸೂಚಿಸಿದೆ.
ಸರ್ಕಾರದ ತಪ್ಪಿನಿಂದ ಹಿಂದುಳಿದ ವರ್ಗದವರು ಸಮಸ್ಯೆ ಎದುರಿಸಬಾರದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಯಿತು ಎಂದು ಒಬಿಸಿ ಅರ್ಜಿದಾರರ ಪರ ವಕೀಲ ಶಶಾಂಕ್ ರತ್ನೋ ತಿಳಿಸಿದ್ದಾರೆ. ಜೊತೆಗೆ ಮಧ್ಯಪ್ರದೇಶದ ಎಲ್ಲ 23 ಸಾವಿರ ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ಮೀಸಲಾತಿಯನ್ನು ವಾರ್ಡ್ವಾರು ಮತ್ತು ಪಂಚಾಯಿತಿವಾರು ಕಲ್ಪಿಸಲು ಅವಕಾಶ ನೀಡಿದೆ ಎಂದು ಹೇಳಿದ್ಧಾರೆ.
ಮಂಗಳವಾರವಷ್ಟೇ ಸುಪ್ರೀಂಕೋರ್ಟ್, ಐದು ವರ್ಷಗಳ ಅಧಿಕಾರಾವಧಿ ಮುಗಿದ ಬಾಕಿಯಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಡೆಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು. ಯಾವುದೇ ಮೀಸಲಾತಿ ವಿಷಯ ಮತ್ತು ನೀತಿ-ನಿರ್ಧಾರಗಳಿಗೆ ಕಾಯದೇ ಚುನಾವಣೆ ಮಾಡಬೇಕೆಂದು ತಾಕೀತು ಮಾಡಿತ್ತು.
ಈ ಹಿಂದೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಲ್ಲಿ ಮೂರು ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದೂ ಸುಪ್ರೀಂ ಆದೇಶಿಸಿತ್ತು. ಜನಸಂಖ್ಯೆಯ ಅಂಕಿ-ಅಂಶ, ಶೇಕಡಾವಾರು ಜನಸಂಖ್ಯೆಯ ಹಾಗೂ ಪ್ರಾತಿನಿಧ್ಯವನ್ನು ಪರಿಗಣಿಸಿ ಮೀಸಲಾತಿ ಕಲ್ಪಿಸಬೇಕು ಹಾಗೂ ಶೇ.50ರ ಮೀಸಲಾತಿಯ ಗಡಿ ಮೀರಬಾರದು ಎಂದು ಹೇಳಿತ್ತು.
ಇದನ್ನೂ ಓದಿ:ಉತ್ತರಾಖಂಡ್ ಪ್ರವಾಸದಲ್ಲಿ ಡಿಕೆಶಿ: ಬದ್ರಿನಾಥ್, ಕೇದಾರನಾಥ ಬಳಿಕ ಹರಿದ್ವಾರ ದರ್ಶನ