ನವದೆಹಲಿ:ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಮೇಲೆ ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಮಾಡಿದ ಆರೋಪಗಳ ವರದಿ ಬಗ್ಗೆ ತನಿಖೆ ನಡೆಸಲು ಮೇಲ್ವಿಚಾರಣಾ ಸಮಿತಿ ರಚನೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ವಕೀಲ ವಿಶಾಲ್ ತಿವಾರಿ ಎಂಬುವರು ಅದಾನಿ ಗ್ರೂಪ್ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಮಿತಿ ರಚನೆಗೆ ಕೇಂದ್ರ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೀಗ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ನಾಳೆ ವಿಚಾರಣೆಗೆ ಪಟ್ಟಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಲಿದೆ.
ವಿದೇಶಿ ಸಂಶೋಧನಾ ಸಂಸ್ಥೆಯೊಂದು ಅದಾನಿ ಗ್ರೂಪ್ ಮೇಲೆ ಲೂಟಿಯಂತಹ ಗಂಭೀರ ಆರೋಪ ಮಾಡಿದೆ. ಕಾರ್ಪೋರೇಟ್ ಸಂಸ್ಥೆಗ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲವನ್ನು ಮಂಜೂರಾತಿ ಮಾಡಲಾಗಿದೆ. ಆರೋಪ ದೇಶದ ಪ್ರತಿಷ್ಠೆಯನ್ನು ಹಾಳು ಮಾಡಿದೆ. ಆರ್ಥಿಕತೆಗೆ ನಷ್ಟ ಉಂಟು ಮಾಡಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ನಿವೃತ್ತ ನ್ಯಾಯಾಧೀಶರೇ ಸಮಿತಿಯ ಮೇಲ್ವಿಚಾರಕರಾಗಿರಬೇಕು ಎಂದು ವಕೀಲ ವಿಶಾಲ್ ತಿವಾರಿ ಕೋರಿದ್ದಾರೆ.
ಅದಾನಿ ಗ್ರೂಪ್ನ ಮೇಲೆ ಹಿಂಡೆನ್‌ಬರ್ಗ್ ಆರೋಪದಿಂದ ಷೇರುಗಳ ಕುಸಿತದಿಂದಾಗಿ ಜನರ ಹೂಡಿಕೆಯ ಹಣ ಖೋತಾ ಆಗಿದೆ. ಉದ್ದೇಶಪೂರ್ವಕವಾಗಿ ಮಾಡಿದ ಆರೋಪದಿಂದ ಗ್ರೂಪ್ ಕುಸಿಯುವಂತೆ ಮಾಡಿದ ಅಮೆರಿಕದ ಹಿಂಡೆನ್‌ಬರ್ಗ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.