ನವದೆಹಲಿ: ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಿಬಿಐ ತಮ್ಮನ್ನು ಬಂಧಿಸಿದ ನಂತರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಮ್ಮ ಬಂಧನವನ್ನು ಪ್ರಶ್ನಿಸಿ ಸೋಮವಾರ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಸಿಸೋಡಿಯಾ ಅವರ ಮನವಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಿಸೋಡಿಯಾ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮನವಿ ಸಲ್ಲಿಸಿದ್ದರು.
ಮಂಗಳವಾರ ಮಂಡಳಿಯ ಅವಧಿಯ ಅಂತ್ಯದಲ್ಲಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ಸಿಬಿಐ ಬಂಧಿಸಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ವಿಶೇಷ ನ್ಯಾಯಾಲಯ ಮಾರ್ಚ್ 4 ವರೆಗೆ 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಇದಾದ ಒಂದು ದಿನದಲ್ಲೇ ಸುಪ್ರೀಂ ಕೋರ್ಟ್ ಸಿಸೋಡಿಯಾ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಭಾನುವಾರ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸಿಬಿಐ ಸಿಸೋಡಿಯಾ ಅವರನ್ನು ಬಂದಿಸಿತ್ತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಜಾರಿಗೆ ತರಲು ನಿರ್ಧರಿಸಿರುವ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಇದರಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಹಾಗೂ ಇಡಿ ತನಿಖೆಯ ಭಾಗವಾಗಿ ಸಿಸೋಡಿಯಾ ಅವರನ್ನು ಬಂಧಿಸಿದೆ.
ಆಪ್ ನಾಯಕ ಸಿಸೋಡಿಯಾ ಅವರನ್ನು ಬಂಧಿಸುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಸಿಸೋಡಿಯಾ ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ವಿರುದ್ಧ ಕೈಕೋಳ ಧರಿಸಿ ಕೆಲವರು ಕಾಲ್ನಡಿಗೆ ಜಾಥಾವನ್ನು ನಡೆಸಿದರೆ, ಇನ್ನೂ ಕೆಲವು ಕಾರ್ಯಕರ್ತರು ರಸ್ತೆಗಳಲ್ಲಿ ಕುಳಿತು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತ್ತು. ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಹಿಂದಕ್ಕೆ ತಳ್ಳುತ್ತಿರುವ ದೃಶ್ಯಗಳು ಕಂಡು ಬಂದಿದ್ದವು.
ಎಎಪಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ('ಜೈಲ್ ಕೇ ತಾಲೇ ಟೂಟೇಂಗೆ, ಮನೀಶ್ ಸಿಸೋಡಿಯಾ ಚೂಟೆಂಗೆ') ಜೈಲಿನ ಬೀಗಗಳನ್ನು ಒಡೆದು, ಮನೀಶ್ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡುತ್ತೇವೆ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಈ ಮಧ್ಯೆ, ಸಿಸೋಡಿಯಾ ಬಂಧನದ ಕುರಿತು ಸಿಬಿಐ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಹೇಳಿಕೆಯಲ್ಲಿ ಸಿಸೋಡಿಯಾ ಅವರು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಮತ್ತು ಅಬಕಾರಿ ಹಗರಣ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿತ್ತು. ತನಿಖೆಗೆ ಸಂಬಂಧಿಸಿದಂತೆ ಫೆಬ್ರುವರಿ 19 ರಂದು ಹಾಜರಾಗುವಂತೆ ಸಿಸೋಡಿಯಾ ಅವರಿಗೆ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಆದರೆ ದೆಹಲಿ ಬಜೆಟ್ ಕಾರಣ ನೀಡಿ ಒಂದು ವಾರ ಸಮಯಾವಕಾಶವನ್ನು ಕೋರಿದ್ದರು. ಇದೀಗ ವಿಚಾರಣೆಗೆ ಹಾಜರಾಗಿಯೂ, ಇಲ್ಲಿಯೂ ನುಣುಚಿಕೊಳ್ಳುವಂತಹ ಉತ್ತರಗಳನ್ನು ನೀಡಿದ್ದಾರೆ. ತಮ್ಮ ವಿರುದ್ಧ ಸಾಕ್ಷ್ಯವನ್ನು ಎದುರಿಸುತ್ತಿದ್ದರೂ ತನಿಖೆಗೆ ಸರಿಯಾಗಿ ಸಹಕರಿಸಲಿಲ್ಲ. ಆದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿತ್ತು.
ಇದನ್ನೂ ಓದಿ:5 ದಿನ ಸಿಬಿಐ ಕಸ್ಟಡಿಗೆ ದೆಹಲಿ ಸಚಿವ ಮನೀಶ್ ಸಿಸೋಡಿಯಾ; ಆಪ್ನಿಂದ ತೀವ್ರ ಪ್ರತಿಭಟನೆ