ನವದೆಹಲಿ:2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಿಂಪಡೆದ ಹಿನ್ನೆಲೆ, ಒಂದು ವಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 14 ಸಾವಿರ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ಕರೆನ್ಸಿ ನೋಟುಗಳನ್ನು ಠೇವಣಿ ಸ್ವೀಕರಿಸಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ "ಸುಮಾರು 14,000 ಸಾವಿರ ಕೋಟಿ ರೂಪಾಯಿ ಮೌಲ್ಯದ 2,000 ಮುಖಬೆಲೆ ನೋಟುಗಳು ಖಾತೆಗಳಿಗೆ ಠೇವಣಿಯಾಗಿ ಬಂದಿದೆ ಮತ್ತು ಸುಮಾರು 3,000 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬ್ಯಾಂಕ್ ಶಾಖೆಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿರುವ ಶೇ 20ರಷ್ಟು ನೋಟುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಂದಿದೆ ಎಂದು ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ತಿಳಿಸಿದರು.
ಆರ್‌ಬಿಐ ನೋಟು ಹಿಂಪಡೆದಿದ್ದು ಏಕೆ?: ಆರ್‌ಬಿಐ ಪ್ರಕಾರ, 2,000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016ರಲ್ಲಿ ಪರಿಚಯಿಸಲಾಯಿತು. ಆರ್ಥಿಕತೆಯ ಕರೆನ್ಸಿ ಅಗತ್ಯತೆಯನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲ 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಪಡಿಸಲಾಗಿತ್ತು. ಇತರ ಮುಖಬೆಲೆಯ ಕರೆನ್ಸಿ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿತು. ಆರ್‌ಬಿಐ ಈಗಾಗಲೇ 2018 -19 ರಿಂದ 2 ಸಾವಿರ ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಿದೆ.
ಹಳೆಯ 500 ಮತ್ತು 1,000 ರು ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯಗೊಳಿಸಿದ ನವೆಂಬರ್ 2016 ರ ಡಿಮಾನಿಟೈಸೇಶನ್‌ಗಿಂತ ಭಿನ್ನವಾಗಿ 2,000 ರೂ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ. ಬ್ಯಾಂಕ್ ಖಾತೆಗಳಲ್ಲಿ ವಿನಿಮಯ ಮತ್ತು ಠೇವಣಿ ಮಾಡಲು ಸಾಕಷ್ಟು ಸಮಯ ಲಭ್ಯವಿದೆ. ಆದ್ದರಿಂದ ಜನರು ಭಯಪಡಬಾರದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ಸೋಮವಾರ ಹೇಳಿದ್ದರು. ಆರ್‌ಬಿಐನಲ್ಲಿ ಮಾತ್ರವಲ್ಲದೇ ಬ್ಯಾಂಕ್‌ಗಳು ನಿರ್ವಹಿಸುವ ಕರೆನ್ಸಿ ಚೆಸ್ಟ್‌ಗಳಲ್ಲಿಯೂ ಸಾಕಷ್ಟು ಪ್ರಮಾಣದ ಮುದ್ರಿತ ನೋಟುಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದರು.