ನವದೆಹಲಿ :ಕೊರೊನಾ ಎರಡನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 71 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ.
ಇದರಲ್ಲಿ 1000 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆಗಳು, 250 ಐಸಿಯು ಬೆಡ್ ಸೌಲಭ್ಯಗಳು ಮತ್ತು 1000 ಹಾಸಿಗೆಗಳ ಐಸೋಲೇಷನ್ ಕೇಂದ್ರಗಳನ್ನು ಸ್ಥಾಪಿಸಲು ಬ್ಯಾಂಕ್ 30 ಕೋಟಿ ರೂ. ಮೀಸಲಿಡಲಾಗುವುದು. ಎನ್‌ಜಿಒಗಳೊಂದಿಗೆ ಸಹಭಾಗಿತ್ವದಲ್ಲಿ ಕೋವಿಡ್ -19 ಸಂಬಂಧಿತ ವಿಷಯಗಳಿಗೆ ಸಹಾಯವಾಣಿ ರಚಿಸಲು, ವ್ಯಾಕ್ಸಿನೇಷನ್ ಡ್ರೈವ್ ಬಲಪಡಿಸಲು 10 ಕೋಟಿ ರೂ. ನೀಡಲಾಗುವುದು ಎಂದು ಎಸ್‌ಬಿಐ ಹೇಳಿದೆ.
ಇದನ್ನೂ ಓದಿ: 3.68 ಲಕ್ಷ ಕೋವಿಡ್ ಕೇಸ್, 3,417 ಸಾವು: ಒಂದೇ ದಿನ 3 ಲಕ್ಷ ಸೋಂಕಿತರು ಗುಣಮುಖ
ಉಳಿದ ಹಣವನ್ನು ಆಮ್ಲಜನಕದ ಪೂರೈಕೆ ಸೇರಿದಂತೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಬೇಕಾಗುವ ತುರ್ತು ವೈದ್ಯಕೀಯ ಅಗತ್ಯಗಳನ್ನು ಒದಗಿಸಲು ಬಳಸಲಾಗುವುದು. ಈ ಸೌಲಭ್ಯಗಳನ್ನು ಆಯಾ ನಗರಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
"ಕೋವಿಡ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಸಮಾಜಕ್ಕೆ ಸಣ್ಣ ಕೊಡುಗೆ ನೀಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ" ಎಂದು ಎಸ್‌ಬಿಐ ಮುಖ್ಯಸ್ಥ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ.