ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತಿಹಾರ್ ಜೈಲು ಪಾಲಗಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವಿಡಿಯೋ ಶನಿವಾರ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಜೈಲು ಅಧೀಕ್ಷಕ ಅಜಿತ್ ಕುಮಾರ್ ಮತ್ತು ಇತರರೊಂದಿಗೆ ತಮ್ಮ ಕೊಠಡಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರೀಶ್ ಖುರಾನಾ ಹೇಳಿದ್ದಾರೆ.
ಇದು ಜೈಲು ಕೈಪಿಡಿಯ ಸಂಪೂರ್ಣ ಉಲ್ಲಂಘನೆಯಾಗಿದೆ. ಇದಕ್ಕೂ ಮುನ್ನ ಸತ್ಯೇಂದ್ರ ಜೈನ್ ಮಸಾಜ್ ಮಾಡಿಸಿಕೊಂಡು ಹೋಟೆಲ್ ತಿಂಡಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸಚಿವ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿದ್ದಾಗ ತಮ್ಮ ಪ್ರಭಾವವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ.
ನವೆಂಬರ್ 14 ರಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಸತ್ಯೇಂದ್ರ ಜೈನ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆ ನಡೆಸಿ ಎಂದು ಇಡಿ ನ್ಯಾಯಲಯಕ್ಕೆ ದೂರು ನೀಡಿದ್ದರು. ಜೈಲು ಕೈಪಿಡಿ ಉಲ್ಲಂಘಿಸಿ ಮಸಾಜ್ ಮತ್ತಿತರ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಭೇಟಿಯಾಗುತ್ತಿದ್ದಾರೆ ಎಂದೂ ಹೇಳಲಾಗಿದೆ.
ಇದಲ್ಲದೆ, ಸತ್ಯೇಂದ್ರ ಜೈನ್ ಜೈಲಿನಲ್ಲಿ ಮಸಾಜ್ ಮಾಡುತ್ತಿರುವ ವಿಡಿಯೋವನ್ನು ಇಡಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಹಸ್ತಾಂತರಿಸಿತ್ತು, ಆ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಿಜೆಪಿ ನಾಯಕ ಶಹಜಾದ್ ಪೂನಾವಾಲಾ ಅವರು ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೂರು ನೀಡಿದ್ದರು, ನಂತರ ಲೆಫ್ಟಿನೆಂಟ್ ಗವರ್ನರ್ ಅವರು ವಿಷಯವನ್ನು ತನಿಖೆ ಮಾಡುವಂತೆ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ತನಿಖೆ ಬಳಿಕ ಜೈಲು ನಂ.7ರ ಅಧೀಕ್ಷಕ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿವಂತೆ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಲಾಭ ಪಡೆಯುತ್ತಿದ್ದಾರೆ: ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರು ಸತ್ಯೇಂದ್ರ ಜೈನ್ ಇನ್ನೂ ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಉಳಿದಿದ್ದಾರೆ, ಮೇ 30 ರಂದು ಅವರನ್ನು ಬಂಧಿಸುವ ಮೊದಲು ಆರೋಗ್ಯ ಮತ್ತು ಜೈಲು ಇಲಾಖೆಗಳ ಜೊತೆ ಸಂಪರ್ಕಹೊಂದಿದ್ದರು ಎಂದು ಹೇಳಿದ್ದಾರೆ. ಈಗಾಗಲೇ ಜೈಲು ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದು, ಅಕ್ರಮ ಲಾಭ ಪಡೆಯುತ್ತಿದ್ದಾರೆ. ಕೋಟಿಗಟ್ಟಲೆ ಲಂಚ ನೀಡಿ ಜೈಲಿನಲ್ಲಿರುವ ಸೌಲಭ್ಯಗಳ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಸತ್ಯೇಂದ್ರ ಜೈನ್ ವಿಡಿಯೋ ವೈರಲ್; ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ