ಪಶ್ಚಿಮ ಚಂಪಾರಣ್ (ಬಿಹಾರ್):ಇಲ್ಲಿನಬೆಟ್ಟಿಯ ಸಮೀಪದ ಮುಜಾಫರ್‌ಪುರ ನರ್ಕಟಿಯಾಗಂಜ್ ರೈಲು ಮಾರ್ಗದಲ್ಲಿ ಭಾರಿ ಅವಘಡವೊಂದು ತಪ್ಪಿದೆ. ಚಲಿಸುತ್ತಿದ್ದ ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲಿನ ಬಿ4 ಹಾಗೂ ಬಿ5 ಎಂಬ ಎರಡು ಬೋಗಿಗಳು ಕಳಚಿಕೊಂಡ ಘಟನೆ ಮಜೌಲಿಯ ಮೆಹಂದಿಪುರ ಬಳಿ ಗುರುವಾರ ನಡೆದಿದೆ.
ರೈಲಿನ ಇಂಜಿನ್ ಮತ್ತು ಎಸಿ ಕೋಚ್‌ಗಳು ಬೇರ್ಪಟ್ಟಿದ್ದವು. ರೈಲಿನ ಎಂಜಿನ್ ಇತರ ರೈಲು ಬೋಗಿಗಳನ್ನು ಎಳೆದುಕೊಂಡು ಮುಂದೆ ಸಾಗಿದೆ. ಹಿಂಬದಿಯಲ್ಲಿ ಬೇರ್ಪಟ್ಟಿದ್ದ ಬೋಗಿಗಳು ದಿಢೀರ್ ನಿಲುಗಡೆಯಾಗಿವೆ. ಈ ವೇಳೆ ಪ್ರಯಾಣಿಕರು ಆಘಾತಕ್ಕೆ ಒಳಗಾಗಿದ್ದರು. ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ನೋಡಿದಾಗ ರೈಲಿನ ಇಂಜಿನ್ ತುಂಬಾ ದೂರ ಸಾಗಿದ್ದು ಗೊತ್ತಾಗಿದೆ. ರೈಲಿನ ಎಂಜಿನ್ ನಾಪತ್ತೆಯಾಗಿರುವುದನ್ನು ಕಂಡ ಪ್ರಯಾಣಿಕರು ಅರೆಕ್ಷಣ ಗಾಬರಿಯಾಗಿದ್ದರು.
ರೈಲು ಹಠಾತ್ ನಿಲುಗಡೆಯಾಗಿದ್ದೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಹೇಳಿದರು. ಬಿ-5 ಬೋಗಿ ಮುಂದೆ ಚಲಿಸಿದ್ದು, ಉಳಿದ ಬೋಗಿಗಳು ಹಿಂದೆ ಉಳಿದಿದ್ದವು. ಬೋಗಿ ಏಕಾಏಕಿ ನಿಂತಿದ್ದರಿಂದ ಜನರು ಹೊರಬಂದು ನೋಡಿದಾಗ ಇಂಜಿನ್ ಮುಂದೆ ಚಲಿಸಿದ್ದು ತಿಳಿದುಬಂದಿತ್ತು.
ಯಾವುದೇ ಪ್ರಾಣ, ಆಸ್ತಿ ಹಾನಿಯಾಗಿಲ್ಲ. ಘಟನೆಯಿಂದ ಪ್ರಯಾಣಿಕರು ಕೆಲಹೊತ್ತು ಆತಂಕದಲ್ಲಿ ಸಿಲುಕಿದ್ದರು. ಕೆಲಕಾಲ ಸ್ಥಳದಲ್ಲಿ ಗೊಂದಲ, ಸಂಘರ್ಷಮಯ ವಾತಾವರಣ ಉಂಟಾಗಿತ್ತು. ಇದಾದ ನಂತರ ಬೇರ್ಪಟ್ಟಿದ್ದ ಎರಡು ಎಸಿ ಕೋಚ್ಗಳನ್ನು ಸೇರಿಸುವ ಕಾರ್ಯ ನಡೆದಿದೆ. ರೈಲು ನಿಗದಿಪಡಿಸಿದ ಸ್ಥಳಕ್ಕೆ ತೆರಳಿದೆ.
ರಕ್ಸೌಲ್‌ನಿಂದ ದೆಹಲಿಗೆ ತೆರಳುತ್ತಿದ್ದ ಸತ್ಯಾಗ್ರಹ ಎಕ್ಸ್‌ಪ್ರೆಸ್‌ನ ಬೋಗಿಗಳ ಕೊಂಡಿ ಜೋಡಣೆ ಮಾಡುವ ಕಾರ್ಯದಲ್ಲಿ ನಿರ್ಲಕ್ಷ್ಯ ನಡೆದಿರುವುದೇ ಈ ಅವಘಡಕ್ಕೆ ಕಾರಣವೆನ್ನಲಾಗಿದೆ. ಈ ಬಗ್ಗೆ ಭಾರತೀಯ ರೈಲ್ವೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ರೈಲು ದೆಹಲಿಗೆ ಪ್ರಯಾಣಿಸಿದೆ.
ಮಂಗಳೂರಿನಲ್ಲಿ ನಡೆದ ಘಟನೆ:ಮೂಲ್ಕಿಯ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್‌ನ ಬಳಿಯಲ್ಲಿ ಗೂಡ್ಸ್ ರೈಲೊಂದು ಸಂಚರಿಸುತ್ತಿದ್ದಂತೆಯೇ ರೈಲಿನ ಮಧ್ಯಭಾಗದಿಂದ ಬೇರ್ಪಟ್ಟು ಬೋಗಿಗಳು ಹಳಿಯಲ್ಲಿಯೇ ಉಳಿದಿರುವ ಘಟನೆ ಗುರುವಾರ ನಡೆದಿದೆ. ರೈಲಿನ ಮಧ್ಯಭಾಗದಿಂದ ಬೇರ್ಪಟ್ಟ ಬೋಗಿಗಳು ಹಳಿಯ ಮೇಲೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿಂತಿದ್ದವು. ಸಮೀಪದಲ್ಲಿದ್ದ ರೈಲ್ವೆ ಗೇಟ್ ಬಳಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಪಡುಬಿದ್ರಿಯಿಂದ ಮಂಗಳೂರಿನ ಎನ್‌ಎಂಪಿಟಿಯತ್ತ ತೆರಳುತ್ತಿದ್ದ ರೈಲು ತಾಂತ್ರಿಕ ದೋಷದಿಂದ ಬೋಗಿಗಳು ಮಧ್ಯಭಾಗದಿಂದ ಸಂಪರ್ಕ ಕಡಿದುಕೊಂಡು ಬೇರ್ಪಟ್ಟಿದ್ದವು. ಇದರಿಂದ ಗೇಟ್ ಸಹ ತೆರೆದುಕೊಳ್ಳದೇ ಇದ್ದುದರಿಂದ ನೂರಾರು ವಾಹನಗಳು ಎರಡೂ ಕಡೆಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇರ್ಪಟ್ಟ ಸ್ಥಿತಿಯಲ್ಲಿ ಸುಮಾರು ಒಂದು ಕಿ.ಮೀ.ವರೆಗೆ ರೈಲು ಇಂಜಿನ್ ಚಲಿಸಿದ್ದು, ನಂತರ ಸುರತ್ಕಲ್‌ನಿಂದ ತಾಂತ್ರಿಕ ತಜ್ಞರು ಬಂದು ದುರಸ್ತಿ ಕಾರ್ಯ ಕೈಗೊಂಡ ನಂತರವೇ, ಗೂಡ್ಸ್ ರೈಲು ಸಂಚಾರ ಮುಂದುವರಿಸಿತು.
ಇದನ್ನೂ ಓದಿ:ಎಲ್ಇಟಿ ಉಗ್ರನಾಗಿ ಬದಲಾಗಿದ್ದ ಸರ್ಕಾರಿ ಶಿಕ್ಷಕ ಸೆರೆ: ಮೊದಲ ಬಾರಿಗೆ ಪರ್ಫ್ಯೂಮ್ ಐಇಡಿ ಪತ್ತೆ!