ಖಗೋಳದಲ್ಲಿ ಇಂದು ವಿಸ್ಮಯ ನಡೆಯಲಿದೆ. ಭೂಮಿ ಮತ್ತು ಶನಿ ಗ್ರಹಗಳು ಆಗಸ್ಟ್ 1-2ರಂದು ಒಂದಕ್ಕೊಂದು ತುಂಬಾ ಸನಿಹ ಬರಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ವರ್ಷಕ್ಕೊಮ್ಮೆ ನಡೆಯುವ ಅಚ್ಚರಿ.
ಭಾರತೀಯ ಕಾಲಮಾನದ ಪ್ರಕಾರ, ಇಂದು ಬೆಳಿಗ್ಗೆ 11.30ಕ್ಕೆ ಶನಿ ಗ್ರಹವು ಭೂಮಿಗೆ ಹತ್ತಿರ ಬರಲಿದೆ. ಒಡಿಶಾದ ಸಮಂತಾ ಪ್ಲಾನೆಟೋರಿಯಂನ ಉಪನಿರ್ದೇಶಕ ಸುವೇಂದು ಪಟ್ನಾಯಕ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವರ್ಷದಲ್ಲಿ ಒಮ್ಮೆ ಉಂಟಾಗುವ ಈ ಅದ್ಭುತ ಆಗಸ್ಟ್ 2 ರಂದು ಬೆಳಿಗ್ಗೆ 11: 30 ನಡೆಯಲಿದೆ. ಶನಿ ಮತ್ತು ಭೂಮಿಯು ಒಂದಕ್ಕೊಂದು ಹತ್ತಿರದಲ್ಲಿರಲಿದೆ ಎಂದು ಹೇಳಿದರು.
ಈ ಅದ್ಭುತವನ್ನು ಪ್ರಪಂಚದಾದ್ಯಂತ ಜನರು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ. ಶನಿಯ ಈ ಸ್ಥಾನವು ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಆಗಸ್ಟ್ 2 ರಂದು ಬೆಳಗ್ಗೆ 11.30ಕ್ಕೆ ಭೂಮಿಯ ಹತ್ತಿರ ತಲುಪಲಿದೆ ಎಂದು ಹೇಳಲಾಗಿದೆ.
ಇದರ ನಂತರ ಗುರು ಆಕಾಶದಲ್ಲಿ ಪ್ರಕಾಶಮಾನವಾದ ಗ್ರಹವಾಗಿ ಉಳಿಯುತ್ತದೆ. ಇನ್ನು ಶನಿಯ ಸ್ಥಾನವು ಗುರುವಿನ ಪಶ್ಚಿಮಕ್ಕೆ ಇರುತ್ತದೆ ಎಂದು ಹೇಳಲಾಗಿದೆ.
ಭೂಮಿ ಮತ್ತು ಶನಿ ಗ್ರಹದ ನಡುವೆ ಸುಮಾರು 1.3341 ಬಿಲಿಯನ್ ಕಿ.ಮೀನಷ್ಟು ಅಂತರವಿದೆ. ಶನಿ ಗ್ರಹವು ಸೂರ್ಯನಿಂದ 6ನೇಯ ಗ್ರಹ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2ನೇ ಅತಿ ದೊಡ್ಡ ಗ್ರಹ ಎಂದು ಖ್ಯಾತಿ ಪಡೆದಿದೆ. ಶನಿಗ್ರಹದಲ್ಲಿ ಉಂಗುರ ವ್ಯವಸ್ಥೆಯನ್ನು ಕಾಣಬಹುದು. ಈ ಉಂಗುರಗಳು ಮುಖ್ಯವಾಗಿ ಮಂಜು, ಕಲ್ಲಿನ ಚೂರುಗಳು ಮತ್ತು ಧೂಳಿನಿಂದ ಆವೃತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.