ನವದೆಹಲಿ:ಗಡಿಯಲ್ಲಿ ಭಾರತೀಯ ಸೇನಾ ಪಡೆಯ ಹದ್ದಿನ ಕಣ್ಣಿನ ಮಧ್ಯೆಯೂ ಪಾಕಿಸ್ತಾನ ಮತ್ತು ಚೀನಾ ಪಡೆಗಳ ಉಪಟಳ ಹೆಚ್ಚಿದ ಕಾರಣ ಉಪಗ್ರಹದ ಮೂಲಕ ಇನ್ನೂ ಹೆಚ್ಚಿನ ನಿಗಾ ವಹಿಸಲು ಭಾರತೀಯ ಸೇನೆ ಮುಂದಾಗಿದ್ದು, ಕಣ್ಗಾವಲು ಉಪಗ್ರಹಕ್ಕಾಗಿ 4 ಸಾವಿರ ಕೋಟಿ ರೂ. ಪ್ರಸ್ತಾಪವನೆ ಸಲ್ಲಿಸಿತ್ತು. ಇದನ್ನು ರಕ್ಷಣಾ ಸಚಿವಾಲಯ ಇದೀಗ ಅಂಗೀಕರಿಸಿದೆ.
ಮಂಗಳವಾರ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಭಾರತೀಯ ಸೇನೆಗೆಂದೇ ಮೀಸಲಿಡುವ ಉಪಗ್ರಹದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಗಡಿ ಕಣ್ಗಾವಲಿಗಾಗಿ GSAT 7B ಉಪಗ್ರಹದ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವುದು. ಇದರಿಂದ ಗಡಿ ಪ್ರದೇಶಗಳಲ್ಲಿ ಸೇನೆಯು ತನ್ನ ಕಣ್ಗಾವಲನ್ನು ಹೆಚ್ಚಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.