ಚಮೋಲಿ (ಉತ್ತರಾಖಂಡ):ಹಿಮ ನದಿ ಸ್ಫೋಟದಿಂದ ಉತ್ತರಾಖಂಡ ರಾಜ್ಯದಲ್ಲಿ ಸೃಷ್ಟಿಯಾದ ಅವಾಂತರ ಅಷ್ಟಿಷ್ಟಲ್ಲ. ಹಿಮ ಪ್ರವಾಹದ ನಂತರ ಮತ್ತೊಂದು ಅಪಾಯಕಾರಿ ಸನ್ನಿವೇಶ ಉತ್ತರಾಖಂಡದಲ್ಲಿ ನಿರ್ಮಾಣವಾಗಿದೆ.
ಫೆಬ್ರವರಿ 7ರಂದು ನಡೆದ ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು, ಸಿಲ್ಟ್ ರಿಷಿಗಂಗಾ ನದಿಗೆ ತಡೆಯೊಡ್ಡಿವೆ. ಇದರಿಂದಾಗಿ ಫುಟ್ಬಾಲ್ ಮೈದಾನದ ಮೂರರಷ್ಟು ದೊಡ್ಡದಾದ ಕೃತಕ ಸರೋವರವೊಂದು ನಿರ್ಮಾಣವಾಗಿದ್ದು, ಜನರಲ್ಲಿ ಮತ್ತೆ ಆತಂಕವನ್ನು ಸೃಷ್ಟಿಸಿದ್ದು, ಮಾತ್ರವಲ್ಲದೇ ರಕ್ಷಣಾ ಕಾರ್ಯಕ್ಕೂ ಸ್ವಲ್ಪ ಮಟ್ಟಿಗೆ ತಡೆಯೊಡ್ಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರೈನಿ ಗ್ರಾಮದಿಂದ 8 ಕಿಲೋಮೀಟರ್ ದೂರದಲ್ಲಿ ಈ ಸರೋವರ ನಿರ್ಮಾಣವಾಗಿದೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 11 ಕಾರ್ಮಿಕರ ಸಜೀವ ದಹನ: ಕೇಂದ್ರದಿಂದ ಪರಿಹಾರ ಘೋಷಣೆ
ಈ ಬಗ್ಗೆ ಕೇಂದ್ರ ಜಲ ಆಯೋಗದ ಪ್ರವಾಹ ಮುನ್ಸೂಚನಾ ವಿಭಾಗ ಟ್ವೀಟ್ ಮಾಡಿ, ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕೃತಕ ಸರೋವರ 350 ಮೀಟರ್ ಎತ್ತರ, 10 ಡಿಗ್ರಿ ಕೋನದಲ್ಲಿ 60 ಮೀಟರ್ ಇಳಿಜಾರಿನಿಂದ ಕೂಡಿದೆ ಎಂದು ಮಾಹಿತಿ ನೀಡಿದೆ. ರೋಂಟಿ ನದಿಗೆ ಸಂಗಮವಾಗುವ ಸ್ಥಳದಲ್ಲಿ ರಿಷಿಗಂಗಾ ಮುಚ್ಚಲ್ಪಟ್ಟಿದೆ.
ಇದಕ್ಕೂ ಮೊದಲು ಉತ್ತರಾಖಂಡದ ಹೇಮ್ವಂತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ನರೇಶ್ ರಾಣಾ ಸ್ಥಳಕ್ಕೆ ಧಾವಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಷಿ ಗಂಗಾ ನದಿಗೆ ಹರಿವಿಗೆ ತೊಂದರೆಯಾಗಿರುವ ಕಾರಣದಿಂದ ಕೃತಕ ಸರೋವರ ಸೃಷ್ಟಿಯಾಗಿದ್ದು, ಇದು ತಾತ್ಕಾಲಿಕ ಸಮಸ್ಯೆ ಸೃಷ್ಟಿ ಮಾಡಿದೆ. ಆ ಕೃತಕ ಸರೋವರದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಪಾಯದ ಮುನ್ಸೂಚನೆ ನೀಡಿದ್ದರು.
ಹೇಮ್ವಂತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ನರೇಶ್ ರಾಣಾ
ಕೃತಕ ಸರೋವರ ಸೃಷ್ಟಿಯಾದ ಜಾಗಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್ಡಿಒ) , ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಹಲವು ಪಡೆಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರೋವರ ನಿರ್ಮಾಣದ ಕುರಿತು ದೆಹಲಿಯಲ್ಲಿ ಈಗಾಗಲೇ ಒಂದು ಸಭೆ ನಡೆಸಲಾಗಿದೆ. ಅಲ್ಲಿಂದ ಬರುವ ಸಲಹೆ ಸೂಚನೆಗಳನ್ನು ಆಧರಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗರ್ವಾಲ್ ವಿಭಾಗದ ಆಯುಕ್ತರಾದ ರವಿನಾಥ್ ರಾಮನ್ ಹೇಳಿದ್ದಾರೆ.