ತಿರುವನಂತಪುರಂ (ಕೇರಳ):ತಿರುವನಂತಪುರಂನ ಪೂಜಾಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್ (ಎಲ್ಬಿಎಸ್ಐಟಿಡಬ್ಲೂ) ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಉಪಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ನೇರಳಾತೀತ ವಿಕಿರಣ ಮತ್ತು ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ನ್ಯಾನೊ ಉಪಗ್ರಹವನ್ನು ಸಿದ್ದಪಡಿಸಿದ್ದಾರೆ.
ಮಹೀಳಾ ಇಂಜಿನಿಯರ್ಗಳಿಂದ ನಿರ್ಮಾಣಗೊಂಡ ಈ ಉಪಗ್ರಹಕ್ಕೆ WESAT (Women Engineered Satellite) ಎಂದು ಹೆಸರಿಡಲಾಗಿದೆ. ಅಕ್ಟೋಬರ್ ಕೊನೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ನ್ಯಾನೋ ಉಪಗ್ರಹ ಉಡಾವಣೆ ಮಾಡಲಾಗುತ್ತದೆ.
ಇನ್ಸ್ಟಿಟ್ಯೂಟ್ನ ಸ್ಪೇಸ್ ಕ್ಲಬ್ನಲ್ಲಿ ಸಿದ್ದಗೊಂಡ 1ಕೆಜಿ ತೂಕದ ನ್ಯಾನೊ ಉಪಗ್ರಹ ಸಂಪೂರ್ಣವಾಗಿ ಮಹಿಳೆಯರಿಂದಲೇ ವಿನ್ಯಾಸಗೊಳಿಸಿದ ಮೊದಲ ಉಪಗ್ರಹ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೇರಳದ ಹವಾಮಾನ ಬದಲಾವಣೆಯ ಮೇಲೆ ನೇರಳಾತೀತ ವಿಕಿರಣಗಳ ಪ್ರಭಾವವನ್ನು ಗಮನಿಸುವ ಉದ್ದೇಶದಿಂದ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲ್ಮೈಯಲ್ಲಿ ನೇರಳಾತೀತ ವಿಕಿರಣದ ಮಟ್ಟವನ್ನು ಅಳೆಯುವುದು ಮತ್ತು ಇದರಿಂದ ಉಂಟಾಗುವ ಹವಾಮಾನ ಬದಲಾವಣೆಗಳನ್ನು ಅಧ್ಯಯನ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ ಅಳವಡಿಸಲಾಗಿರುವ ಯಂತ್ರದ ಮೂಲಕ ಈ ಚಟುವಟಿಕೆಗಳನ್ನು ಮಾಡಲಾಗುತ್ತಿದೆ.