ಸತಾರಾ (ಮಹಾರಾಷ್ಟ್ರ): ನಾಲ್ಕು ವರ್ಷದಿಂದ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಆರೋಪಿಯನ್ನ ಪೊಲೀಸರು ರೈತರ ವೇಷ ಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಕ್ಕಲ್ ಅಲಿಯಾಸ್ ಜಕಲ್ಯಾ ರಂಗಾ ಎಂಬಾತ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದ. ಆದರೆ, ಹಲವು ವರ್ಷದಿಂದ ಪೊಲೀಸರು ಆತನನ್ನ ಬಂಧಿಸಲು ಹಲವು ಬಾರಿ ಪ್ರಯತ್ನ ಪಟ್ಟರೂ ಆತ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಪೊಲೀಸರು ಶತಾಯ ಗತಾಯ ಆತನನ್ನು ಬಂಧಿಸಲೇಬೇಕೆಂದು ಗ್ರಾಮದಲ್ಲಿ ಸತತ 5 ದಿನಗಳಿಂದ ರೈತರ ವೇಷ ಧರಿಸಿ ಹೊಲದಲ್ಲಿಯೇ ಆತನನ್ನು ಬಂಧಿಸಿದ್ದಾರೆ.
ಏನಿದು ಘಟನೆ?:ಜಕ್ಕಲ್ ಅಲಿಯಾಸ್ ಜಕಲ್ಯಾ ರಂಗಾ ಎಂಬಾತನ ಮೇಲೆ ಎರಡು ಕೊಲೆ, ಕಳ್ಳತನ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿರುವುದು ಸೇರಿ ಒಟ್ಟು 16 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದ್ದವು.
ಇಲ್ಲಿನ ಜವಾಲಿ, ಸತಾರಾ, ಖಂಡಾಲಾ ಮತ್ತು ಕೊರೇಗಾಂವ್ ಸೇರಿದಂತೆ 5 ತಾಲೂಕುಗಳ ಪೊಲೀಸರು ಆತನ ಜಾಡು ಹಿಡಿದಿದ್ದರು. ಆದರೆ, ಆತ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಪರಾರಿಯಾದ ಅವಧಿಯಲ್ಲಿ ಆತನ ಅಪರಾಧ ಚಟುವಟಿಕೆಗಳು ನಿಂತಿರಲಿಲ್ಲ. ಪೊಲೀಸರಿಗೆ ಗೊಂದಲ ಮಾಡಲೆಂದೇ ಪದೇಪದೆ ವಾಸಸ್ಥಾನ ಬದಲಿಸುತ್ತಿದ್ದ. ಆದರೆ, ಸತಾರಾದಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು.