ಪುಣೆ (ಮಹಾರಾಷ್ಟ್ರ):ಕಟ್ರಾಜ್‌ನ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಕಂಟೈನರ್ ಟ್ರಕ್ಗೆ ಮತ್ತೊಂದು ಟ್ರಕ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್‌ನ ಮುಂಭಾಗದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ಮತ್ತು ಬಾಲಕ ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ಕಟ್ರಾಜ್-ದೇಹು ರಸ್ತೆ ಬೈಪಾಸ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ನರಹೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಎರಡೂ ವಾಹನಗಳು ಸತಾರಾದಿಂದ ಮುಂಬೈ ಕಡೆಗೆ ಹೋಗುತ್ತಿದ್ದವು. ಹೊಸ ಕಾಟ್ರಾಜ್ ಸುರಂಗ ಮತ್ತು ನವಲೆ ಸೇತುವೆಯ ನಡುವಿನ ಬೈಪಾಸ್‌ನ ಇಳಿಜಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಬೈಪಾಸ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಹಾನಿಗೊಳಗಾದ ಕಂಟೈನರ್ ಟ್ರಕ್ ಹಾಗೂ ಟ್ರಕ್ ಅನ್ನು ಕ್ಯಾರೇಜ್‌ವೇಯಿಂದ ತೆಗೆದ ನಂತರ ರಾತ್ರಿ 10.30 ರ ಸುಮಾರಿಗೆ ವಾಹನ ಸಂಚಾರ ಪುನಾರಂಭವಾಗಿದೆ.
ಸಿಂಹಗಡದ ಇನಸ್ಪೆಕ್ಟರ್ ಮಾಹಿತಿ:ಅಪಘಾತದ ನಂತರ ಸಿಂಹಗಡ ರಸ್ತೆ ಮತ್ತು ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. “ಟ್ರಕ್ ಸಾಂಗ್ಲಿಯ ವೀಟಾದಿಂದ ಗುಜರಾತ್‌ಗೆ ಜೋಳದ ಸಿಪ್ಪೆಯನ್ನು ಸಾಗಿಸುತ್ತಿತ್ತು. ಇದು ಬೆಂಕಿಗೆ ಆಹುತಿಯಾಗಿದೆ. ಟ್ರಕ್ ಅನ್ನು ತನ್ನ ಸಹೋದರ ಓಡಿಸುತ್ತಿದ್ದನು ಎಂದು ಟ್ರಕ್ ಮಾಲೀಕ ತಿಳಿಸಿದ್ದಾರೆ'' ಎಂದು ಸಿಂಹಗಡದ ಇನಸ್ಪೆಕ್ಟರ್ ಅಭಯ್ ಮಹಾಜನ್ ಮಾಹಿತಿ ನೀಡಿದ್ದಾರೆ.