ಗುವಾಹಟಿ:ಅಸ್ಸೋಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಹತ್ವದ ಗೆಲುವು ದಾಖಲಿಸಿ ಒಂದು ವಾರ ಕಳೆದರೂ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಯಾರೆಂಬುದೇ ಇನ್ನೂ ಕುತೂಹಲವಾಗಿ ಉಳಿದಿದೆ. ಮುಂದಿನ ಅಸ್ಸೋಂ ನೂತನ ಮುಖ್ಯಮಂತ್ರಿ ಯಾರೆಂಬುದರ ಕುರಿತು ಇಂದು ನಡೆಯುವ ನಿರ್ಣಾಯಕ ಸಭೆಯಲ್ಲಿ ಬಿಜೆಪಿ ನಿರ್ಧಾರ ತೆಗೆದುಕೊಳ್ಳಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಪ್ರಾರಂಭವಾಗಲಿದ್ದು, ಅಸ್ಸೋಂ ಬಿಜೆಪಿ ಮುಖಂಡರ ಜೊತೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಸ್ಸೋಂ ಹಾಲಿ ಸಿಎಂ ಸರ್ಬಾನಂದ ಸೊನೊವಾಲ್ ಹಾಗೂ ಆರೋಗ್ಯ, ವಿತ್ತ ಹಾಗೂ ಶಿಕ್ಷಣ ಸಚಿವರಾಗಿರುವ ಹಿಮಂತ ಬಿಸ್ವಾ ಶರ್ಮಾ- ಈ ಇಬ್ಬರೂ ನೂತನ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಇವರಿಬ್ಬರೂ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿ ನಾಯಕತ್ವ ಸಮಸ್ಯೆ ಮತ್ತು ರಾಜ್ಯದಲ್ಲಿ ಮುಂದಿನ ಸರ್ಕಾರ ರಚನೆ ಕುರಿತು ಚರ್ಚಿಸಿದ್ದಾರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರಿಬ್ಬರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಗೆದ್ದ ರೈತ ಮುಖಂಡ.. ಅಸ್ಸೋಂನಲ್ಲಿ ಹೊಸ ದಾಖಲೆ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡ ರಾಜ್ಯದ ಮೊದಲ ಕಾಂಗ್ರೆಸ್ ಅಲ್ಲದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಎಲೆಕ್ಷನ್ಗೆ ಮುಂಚಿತವಾಗಿ ಬಿಜೆಪಿ ಅಸ್ಸೋಂನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಾರೆಂಬುದು ನಿರ್ಧಾರವಾಗುವ ಸಾಧ್ಯತೆಯಿದೆ.