ಭಾರತೀಯ ಉಪಖಂಡದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯಿ ಈ ಇಬ್ಬರು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನರು ಎಂಬುದನ್ನು ಸಾರಿದ್ದು ಮಾತ್ರವಲ್ಲದೇ, ತಮ್ಮ ಪರಿಶ್ರಮ ಮತ್ತು ಮಾತೃ ಪ್ರಧಾನತೆಯನ್ನು ಉತ್ತಮ ಆರಂಭವನ್ನು ಗುರುತಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
ಅವರು ಈ ಮಟ್ಟದ ಜನಪ್ರಿಯತೆಯನ್ನು ಸಾಧಿಸಲು ಕಾರಣವಾದ ಅಂಶಗಳು ಮತ್ತು ಸಮಯ ಸಂದರ್ಭಗಳು ಸಮಾಜದ ಮತ್ತೊಂದು ಮುಖವನ್ನು ಎತ್ತಿ ತೋರಿಸುತ್ತವೆ. ಅಷ್ಟೇ ಅಲ್ಲ ಕೆಲವೊಮ್ಮೆ ವಿಕಸನ ಮತ್ತು ಅಭಿವೃದ್ಧಿಯ ಆಕರ್ಷಕ ಅಂಶಗಳನ್ನೂ ಪ್ರತಿನಿಧಿಸುತ್ತವೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ (ಕೆಪಿಕೆ) ಪ್ರದೇಶದ ಪಶ್ತುನ್ ಜನಾಂಗದ ಬುಡಕಟ್ಟು ಬಾಲಕಿ ಮಲಾಲಾ. ಇಸ್ಲಾಮಿಕ್ ಕಾನೂನಿನಂತೆ ಬುಡಕಟ್ಟು ಮಹಿಳೆಯರಿಗೆ ಶಾಲೆಗೆ ಹೋಗುವುದನ್ನು ನಿಷೇಧಿಸಿದ ಪಶ್ತೂನ್ ಬುಡಕಟ್ಟು ಉಗ್ರಗಾಮಿಗಳು, ತಮ್ಮ ನೀತಿ - ನಿಯಮಗಳನ್ನ ಉಲ್ಲಂಘಿಸಿದ್ದಾಳೆ ಎಂಬ ಸಿಟ್ಟಿನಿಂದ ಮಲಾಲಾ ಮೇಲೆ ಗುಂಡು ಹಾರಿಸಿದ್ದರು.
ಮಲಾಲಾ ಉಗ್ರಗಾಮಿಗಳ ಆದೇಶಗಳನ್ನು ಧಿಕ್ಕರಿಸಿ, ತನ್ನ ಅಧ್ಯಯನವನ್ನು ಮುಂದುವರೆಸಿದ್ದರು ಮತ್ತು ಇತರರನ್ನು ಅದೇ ರೀತಿ ಮಾಡಲು ಮನವೊಲಿಸಿದ ಕಾರಣ ಅವಳ ಮೇಲೆ ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಲಾಗಿತ್ತು.
ತನಗೆ ಜೀವ ಬೆದರಿಕೆಯಿದ್ದರೂ ಲೆಕ್ಕಿಸದೇ, ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟವನ್ನು ಮುಂದುವರೆಸಿದ ಮಲಾಲಾ ವಿಶ್ವಾದ್ಯಂತ ಪ್ರಾಮುಖ್ಯತೆಯನ್ನು ಪಡೆದರು. ಆಕೆಯ ಸಮರ್ಪಣಾ ಮನೋಭಾವನೆ ಮತ್ತು ನಿರ್ಭಯತೆಯು ನೋಬೆಲ್ ಶಾಂತಿ ಪ್ರಶಸ್ತಿಯನ್ನು ತಂದುಕೊಟ್ಟಿತು.
ಮಲಾಲಾ ಅವರು ಪಾಕಿಸ್ತಾನದ ಫಾಟಾ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕ್ರೂರ ಉಗ್ರಗಾಮಿಗಳ ಕ್ರೌರ್ಯಕ್ಕೆ ತಮ್ಮನ್ನೇ ಒಡ್ಡಿಕೊಂಡರೂ ಹೋರಾಟ ಮಾತ್ರ ನಿಲ್ಲಿಸಲಿಲ್ಲ.
ಹಳ್ಳಿಯಿಂದ ದಿಲ್ಲಿವರೆಗೂ ಛಾಪು:ಮತ್ತೊಂದೆಡೆ, ಮುರ್ಮು ಅವರು ಬುಡಕಟ್ಟು ಹಳ್ಳಿಯ ಹುಡುಗಿಯಿಂದ ಅತ್ಯುನ್ನತ ಹುದ್ದೆಗೆ ತಲುಪಿರುವುದು ಭಾರತದ ಬುಡಕಟ್ಟು ಸಮುದಾಯದವರ ವಿಕಾಸಕ್ಕೆ ಒಂದು ದೃಷ್ಟಾಂತವಾಗಿ ಗೋಚರಿಸುತ್ತದೆ. ಅವರು ಸಂಥಾಲ್ ಸಮುದಾಯದಿಂದ ಬಂದವರಾಗಿದ್ದಾರೆ.
ದೇಶದ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸೋಂ ಮತ್ತು ಜಾರ್ಖಂಡ್ ಈ ನಾಲ್ಕು ರಾಜ್ಯಗಳಲ್ಲಿ ಸಂಥಾಲ್ ಬುಡಕಟ್ಟು ಸಮುದಾಯದವರು ವಾಸವಾಗಿದ್ದಾರೆ. ಶಾಲಾ ಶಿಕ್ಷಕಿಯಿಂದ ರಾಷ್ಟ್ರಪತಿ ಭವನದವರೆಗೆ ಮುರ್ಮು ಅವರ ಪ್ರಯಾಣವು ಭಾರತದಲ್ಲಿನ ಬುಡಕಟ್ಟು ಜನರ ಒಟ್ಟಾರೆ ಅಭಿವೃದ್ಧಿಗೆ ಒಂದು ಮಾದರಿಯಾಗಿ ಕಾಣಿಸುತ್ತದೆ.