ರಾಯ್‌ಪುರ್(ಛತ್ತೀಸ್‌ಗಢ):1947ರಲ್ಲಿ ದೇಶ ವಿಭಜನೆಯಾಗಲು ಗಾಂಧಿ ಕಾರಣ, ಅವರು ದೇಶವನ್ನು ನಾಶಪಡಿಸಿದರು ಎಂದು ಹೇಳುತ್ತಾ ಗಾಂಧೀಜಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವರನ್ನು ಹತ್ಯೆಗೈದ ನಾಥೂರಾಮ್ ಗೊಡ್ಸೆಯನ್ನು ಸಂತ ಕಲಿಚರಣ್ ಹೊಗಳಿದ್ದಾರೆ.
ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್ 2021ರಲ್ಲಿ ಅವರು ಈ ರೀತಿ ಹೇಳುತ್ತಾ ಹೊಸ ವಿವಾದಕ್ಕೆ ನಾಂದಿ ಹಾಡಿದರು. ಕಲಿಚರಣ್ ಅವರ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡ ಮಹಾಂತ್ ರಾಮಸುಂದರ್ ದಾಸ್ ಅವರು ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಹೊರ ನಡೆದ ಪ್ರಸಂಗ ನಡೆಯಿತು.
ಸಂತ ಕಲಿಚರಣ್ ಅವರ ಈ ಹೇಳಿಕೆ ಧರ್ಮ ಸಂಸದ್‌ನಲ್ಲಿ ಭಾರಿ ಗದ್ದಲ ಉಂಟು ಮಾಡಿತು. ರಾಜ್ಯ ಗೋಸೇವಾ ಆಯೋಗದ ಅಧ್ಯಕ್ಷರಾದ ಮಹಾಂತ್ ರಾಮದಾಸ್ ಸುಂದರ್ ಕಾರ್ಯಕ್ರಮ ಮುಖ್ಯ ಪ್ರೇರಕ ಶಕ್ತಿಯಾಗಿದ್ದರೂ ಕಲಿಚರಣ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, 'ಧರ್ಮ ಸಂಸದ್ ಕಾರ್ಯಕ್ರಮದ ನಿಜವಾದ ಉದ್ದೇಶ ಮರೆಮಾಚಿ ರಾಜಕೀಯ ವಿಚಾರಗಳನ್ನು ಎಳೆದು ತಂದಿರುವುದು ದುರದೃಷ್ಟಕರ' ಎಂದರು.
ಸಂತ ಕಲಿಚರಣ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮಹಾಂತ್ ರಾಮ ಸುಂದರ್ ದಾಸ್ 'ರಾಷ್ಟ್ರಪಿತನಿಗೆ ಅವಮಾನ ಮಾಡುವವರ ಮಾತುಗಳನ್ನು ಕೇಳಲು ನಾನಿಲ್ಲಿಲ್ಲ. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಶ್ರೇಷ್ಠ ಸನ್ನಡತೆಯನ್ನು ಅವರು ಹೊಂದಿದ್ದರು. ದೇಶವನ್ನು ದಾಸ್ಯದ ಸಂಕೋಲೆಗಳಿಂದ ಮುಕ್ತಗೊಳಿಸಲು ಅವರು ತಮ್ಮ ಜೀವನವನ್ನೇ ಮುಡುಪಿಟ್ಟರು. ಅಂಥ ವ್ಯಕ್ತಿಯ ಬಗ್ಗೆ ಜನರು ಈ ರೀತಿ ಮಾತನಾಡುವುದು ಖಂಡನೀಯ' ಎಂದು ಹೇಳಿದರು.
ಮುಂದುವರೆದು ಮಾತನಾಡಿದ ರಾಮದಾಸ್ ಸುಂದರ್, 'ಕಲಿಚರಣ್ ವೇದಿಕೆಯಲ್ಲಿ ಈ ರೀತಿ ಹೇಳುತ್ತಿದ್ದರೂ ಪತ್ರಕರ್ತರೂ ಸೇರಿ ಯಾರೊಬ್ಬರೂ ಪ್ರಶ್ನಿಸದೇ ಇದ್ದಿದ್ದು ನಿಜಕ್ಕೂ ನಾಚಿಕೆಗೇಡು. ಮುಂದಿನ ಧರ್ಮ ಸಂಸದ್‌ನಲ್ಲಿ ಪಾಲ್ಗೊಳ್ಳಲಾರೆ' ಎಂದು ಹೇಳಿ ಹೊರನಡೆದರು.
ಸಂತ ಕಲಿಚರಣ್ ಅವರು ಮಹಾತ್ಮ ಗಾಂಧಿ ಕುರಿತಷ್ಟೇ ವಿವಾದಿತ ಹೇಳಿಕೆ ನೀಡಲಿಲ್ಲ. ಇದರ ಜೊತೆಗೆ, ಧರ್ಮ, ಜಾತಿಯ ಕುರಿತಾಗಿಯೂ ವಿವಾದ ಎಬ್ಬಿಸಿದರು. ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಕಟ್ಟಾ ಹಿಂದೂ ಧರ್ಮೀಯನೇ ಆಗಿರಬೇಕು ಎಂದರು. ದೇಶದಲ್ಲಿ ಯಾರು ಮತ ಚಲಾಯಿಸುವುದಿಲ್ಲವೋ ಅಂಥವರು ಪರೋಕ್ಷವಾಗಿ ಇಸ್ಲಾಂಗೆ ಬೆಂಬಲ ನೀಡಿದ ಹಾಗೆಯೇ ಆಗುತ್ತದೆ. ಈ ಮೂಲಕ ಇಸ್ಲಾಂ ಪ್ರಬಲಗೊಳ್ಳಲು ದಾರಿ ಮಾಡಿ ಕೊಡುತ್ತೀರಿ ಎಂದು ಹೇಳಿದರು.