ಕರ್ನಾಟಕ

karnataka

By

Published : Nov 13, 2022, 1:24 PM IST

Updated : Nov 13, 2022, 1:31 PM IST

ETV Bharat / bharat

ಕೇರಳದ ಇಸ್ಲಾಮಿಕ್ ಸಂಸ್ಥೆಯಲ್ಲಿ ಸಂಸ್ಕೃತ ಪಾಠ: ಗಮನ ಸೆಳೆದ ವಿದ್ಯಾರ್ಥಿಗಳ ಶ್ಲೋಕ, ಮಂತ್ರ ಪಠಣೆ

ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಂತ್ರಗಳನ್ನು ಪಠಿಸುವುದು ಮಾತ್ರವಲ್ಲ, ಗುರು ಶಿಷ್ಯರ ನಡುವಿನ ಸಂಭಾಷಣೆಯೂ ಸಂಸ್ಕೃತದಲ್ಲಿಯೇ ನಡೆಯುತ್ತಿರುವುದು ಇಲ್ಲಿನ ವಿಶೇಷ.

Sanskrit lessons in Islamic institution Kerala
ಕೇರಳದ ಇಸ್ಲಾಮಿಕ್ ಸಂಸ್ಥೆಯಲ್ಲಿ ಸಂಸ್ಕೃತ ಪಾಠ

ತ್ರಿಶೂರ್ (ಕೇರಳ): ಇಲ್ಲಿನ ಇಸ್ಲಾಮಿಕ್​ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ ಗುರುಗಳು ಸಂಸ್ಕೃತ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳೂ ಸಂಸ್ಕೃತದಲ್ಲಿ ಶ್ಲೋಕ, ಮಂತ್ರಗಳನ್ನು ಪಠಿಸುತ್ತಾರೆ. ತ್ರಿಶೂರ್​ ಜಿಲ್ಲೆಯ ಮಲಿಕ್ ದೀನರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (MIC) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS)​ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಸ್ಕೃತ ಬೋಧಿಸುತ್ತಿದೆ. ಈ ಸಂಸ್ಥೆ ತಗರತಿಯಲ್ಲಿ ಸಂಸ್ಕೃತ ಪಾಠ ಮಾಡುತ್ತಿರುವ ವಿಡಿಯೋವೊಂದನ್ನು ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದ್ದು, ಪ್ರಶಂಸೆೆ ಗಳಿಸುತ್ತಿದೆ.

ವಿಡಿಯೋದಲ್ಲಿರುವ ವಿದ್ಯಾರ್ಥಿಗಳು ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿ ಶಿರವಸ್ತ್ರಧಾರಿಗಳಾಗಿದ್ದು, ಸಂಸ್ಕೃತದ ಮಂತ್ರಗಳನ್ನು ಪಠಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಂತ್ರಗಳನ್ನು ಪಠಿಸುವುದು ಮಾತ್ರವಲ್ಲ, ಗುರು ಶಿಷ್ಯರ ನಡುವಿನ ಸಂಭಾಷಣೆಯೂ ಇಲ್ಲಿ ಸಂಸ್ಕೃತದಲ್ಲಿಯೇ ನಡೆಯುವುದು ವಿಶೇಷ.

ಈ ಕುರಿತು ಮಾತನಾಡಿರುವ ಪ್ರಾಂಶುಪಾಲ ಓಂಪಿಲ್ಲಿ ಮುಹಮ್ಮದ್ ಫೈಜಿ, 'ನಮ್ಮ ವಿದ್ಯಾರ್ಥಿಗಳು ಇತರ ಧರ್ಮಗಳು, ಅವುಗಳ ಪದ್ಧತಿ, ಆಚರಣೆಗಳ ಬಗ್ಗೆ ಜ್ಞಾನ ಮತ್ತು ಜಾಗೃತಿ ಹೊಂದಿರಬೇಕು ಎನ್ನುವ ಉದ್ದೇಶದಿಂದ ಸಂಸ್ಕೃತದ ಉಪನಿಷತ್ತುಗಳು ಮತ್ತು ಪುರಾಣಗಳನ್ನು ಇಲ್ಲಿ ಕಲಿಸಲಾಗುತ್ತದೆ. ಮುಖ್ಯ ಉದ್ದೇಶವೆಂದರೆ, ನಮ್ಮ ಫೈಜಿ ಅವರ ಶೈಕ್ಷಣಿಕ ಹಿನ್ನೆಲೆ. ಅವರು ಶಂಕರ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿ ಬಂದವರು. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೂ ಅವುಗಳ ಜ್ಞಾನ ದೊರೆಯಬೇಕು ಎಂಬುದು ಅವರ ಆಶಯ' ಎಂದರು.

ಆದರೆ ಸಂಸ್ಕೃತದ ಜೊತೆಗೆ 'ಉಪನಿಷತ್ತುಗಳು', 'ಶಾಸ್ತ್ರಗಳು', 'ವೇದಾಂತ'ಗಳ ಆಳವಾದ ಅಧ್ಯಯನ ಎಂಟು ವರ್ಷಗಳ ಅವಧಿಯಲ್ಲಿ ಸಾಧ್ಯವಿಲ್ಲ. ಬದಲಿಗೆ ಇವುಗಳ ಬಗ್ಗೆ ಮೂಲಭೂತ ಜ್ಞಾನವನ್ನು ನೀಡಿ ಅವರಲ್ಲಿ ಇನ್ನೊಂದು ಧರ್ಮದ ಬಗ್ಗೆ ಅರಿವು ಮೂಡಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.

ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಪ್ರಮುಖ ಭಾಗಗಳನ್ನು 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಎಂಟು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಕಲಿಸಲಾಗುತ್ತದೆ. ನಮ್ಮ ಸಂಸ್ಥೆ ಕ್ಯಾಲಿಕಟ್ ವಿಶ್ವವಿದ್ಯಾಲಯದ ಜೊತೆ ಸಂಯೋಜನೆ ಗೊಂಡಿರುವುದರಿಂದ ಕಲೆಯಲ್ಲಿ ಪದವಿ ಕೋರ್ಸ್‌ ಜೊತೆಗೆ ಉರ್ದು ಮತ್ತು ಇಂಗ್ಲಿಷ್‌ನಂತಹ ಇತರ ಭಾಷೆಗಳನ್ನು ಸಹ ಕಲಿಸಲಾಗುತ್ತದೆ.

ಆರಂಭದಲ್ಲಿ ಅರೇಬಿಕ್​ನಂತೆಯೇ ಸಂಸ್ಕೃತವನ್ನು ಕಲಿಯುವುದು ಕಷ್ಟವಾಗಿತ್ತು. ಆದರೆ ನಿರಂತರವಾಗಿ ಅಧ್ಯಯನ, ಅಭ್ಯಾಸ ಮಾಡಿದರೆ ಅರೇಬಿಕ್​ನಂತೆಯೇ ಕಾಲಕ್ರಮೇಣ ಸುಲಭವಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳು, ಮಂತ್ರಗಳನ್ನು ಕಲಿಯಲು ಪೋಷಕರಿಂದ ಅಥವಾ ಬೇರೆ ಯಾರಿಂದಲೂ ಆಕ್ಷೇಪಣೆ ಇರಲಿಲ್ಲ. ಆದರೆ ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ಕಲಿಸಲು ಉತ್ತಮ ಅಧ್ಯಾಪಕರನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು. ಏಳು ವರ್ಷಗಳ ಹಿಂದೆ ಸಂಸ್ಕೃತ ಪಾಠ ಪ್ರಾರಂಭಿಸಿದೆವು. ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡುವ ಗುರುಗಳು ನಮ್ಮೊಂದಿಗಿದ್ದಾರೆ. ನಮ್ಮ ಏಳು ಶಾಖೆಗಳಲ್ಲಿ ಒಂದಾದ ಇಲ್ಲಿ ಮಾತ್ರ ಸಂಸ್ಕೃತವನ್ನು ಬೋಧಿಸಲಾಗುತ್ತದೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದರು.

ಇದನ್ನೂ ಓದಿ:ವಿಜಯಪುರ ಬಟ್ಟೆ ವ್ಯಾಪಾರಿಯ ವಿಶಿಷ್ಟ ಸಂಸ್ಕೃತ ಪ್ರೇಮ!

Last Updated : Nov 13, 2022, 1:31 PM IST

ABOUT THE AUTHOR

...view details