ನವದೆಹಲಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ದೆಹಲಿ ಸರ್ಕಾರದ ನೂತನ ಮದ್ಯ ನೀತಿ ಹಗರಣದಲ್ಲಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೆಸರು ಉಲ್ಲೇಖಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಹಿನ್ನಡೆಯಾಗಿದೆ. ಸಂಜಯ್ ಸಿಂಗ್ ಹೆಸರನ್ನು ತಪ್ಪಾಗಿ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ಇಡಿ ಒಪ್ಪಿಕೊಂಡಿದ್ದು, ಅದನ್ನು ತೆಗೆದುಹಾಕಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದಾಗಿ ಸ್ಪಷ್ಟನೆ ನೀಡಿದೆ ಎಂದು ವರದಿಯಾಗಿದೆ.
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇಲ್ಲಿಯವರೆಗೆ ಎರಡೂ ತನಿಖಾ ಸಂಸ್ಥೆಗಳು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನೂ ದಾಖಲಿಸಿವೆ. ಆದರೆ, ಇತ್ತೀಚೆಗೆ ಇಡಿ ಸಲ್ಲಿಸಿದ ಪೂರಕ ಚಾರ್ಜ್ ಶೀಟ್‌ನಲ್ಲಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಹೆಸರು ಉಲ್ಲೇಖಿಸಿದ್ದು, ಹೊಸ ಚರ್ಚೆಗೆ ಕಾರಣವಾಗಿತ್ತು.
ಇಡಿ ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಜಯ್ ಸಿಂಗ್ ಮಾಧ್ಯಮಗೋಷ್ಟಿ ನಡೆಸಿ, ಇಡಿ 48 ಗಂಟೆಯೊಳಗೆ ಆರೋಪ ಪಟ್ಟಿಯಲ್ಲಿರುವ ತಮ್ಮ ಹೆಸರನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದರು. ಅಲ್ಲದೇ, ಇಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಮತ್ತು ಸಹಾಯಕ ನಿರ್ದೇಶಕ ಜೋಗಿಂದರ್ ಸಿಂಗ್ ನನ್ನ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ, ಈ ಇಬ್ಬರೂ ಅಧಿಕಾರಿಗಳು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.