ಥಾಣೆ(ಮಹಾರಾಷ್ಟ್ರ):ಮಹಾರಾಷ್ಟ್ರ ಗದ್ದುಗೆ ಗುದ್ದಾಟದ ಮಧ್ಯೆ ವಿಚಾರಣೆಗೆ ಹಾಜರಾಗುವಂತೆ ಶಿವಸೇನೆಯ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಜಾರಿ ಮಾಡಿದೆ. ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂದೆ ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂದೆ ಈ ಕುರಿತು ಪ್ರತಿಕ್ರಿಯಿಸಿ, "ಸಂಜಯ್ ರಾವತ್‌ಗೆ ನನ್ನ ಶುಭಾಶಯಗಳು" ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:'ಮಹಾ' ಬಂಡಾಯ ಶಾಸಕರಿಗೆ ಸುಪ್ರೀಂ ತಾತ್ಕಾಲಿಕ ರಿಲೀಫ್; ಜು.11ಕ್ಕೆ ಮುಂದಿನ ವಿಚಾರಣೆ
"ಗುವಾಹಟಿಯಲ್ಲಿ ಮೊಕ್ಕಾಂ ಹೂಡಿರುವ 40 ಶಾಸಕರು ಜೀವಂತ ಶವಗಳಿದ್ದಂತೆ. ಅವರ ಆತ್ಮಗಳು ಈಗಾಗಲೇ ದಹಿಸಿವೆ. ಆ ಬಣ ಮಹಾರಾಷ್ಟ್ರಕ್ಕೆ ಹಿಂತಿರುಗಿದಾಗ ಮರಣೋತ್ತರ ಪರೀಕ್ಷೆಗಾಗಿ ಅವರ ದೇಹಗಳನ್ನು ನೇರವಾಗಿ ವಿಧಾನಸಭೆಗೆ ಕಳುಹಿಸಲಾಗುತ್ತದೆ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿ ಅವರನ್ನು ಏನು ಬೇಕಾದರೂ ಮಾಡಬಹುದು ಎಂಬುದು ಅವರಿಗೆ ತಿಳಿದಿದೆ" ಎಂದು ಸಂಜಯ್ ರಾವತ್ ಕಟುಟೀಕೆ ಮಾಡಿದ್ದರು. ಮುಂದುವರೆದು, "ನೀವು ಒಬ್ಬ ತಂದೆಯ ಮಕ್ಕಳಾಗಿದ್ದರೆ, ತಕ್ಷಣವೇ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಿಮ್ಮೆಲ್ಲರನ್ನೂ ನಾವು ಸೋಲಿಸುತ್ತೇವೆ" ಎಂದು ಸವಾಲು ಹಾಕಿದ್ದರು.
'ಪದಗಳ ಬಗ್ಗೆ ಎಚ್ಚರಿಕೆ ಇರಲಿ'- ಶ್ರೀಕಾಂತ್ ಶಿಂದೆ: ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಕಾಂತ್ ಶಿಂದೆ, "ಪದಗಳ ಬಳಕೆ ವೇಳೆ ಸಂಜಯ್ ರಾವತ್ ಎಚ್ಚರಿಕೆ ವಹಿಸಬೇಕು. ಇದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ. ಯಾವುದೇ ವ್ಯಕ್ತಿಯ ಬಗ್ಗೆ ಹೇಳಿಕೆ ನೀಡುವಾಗ ಮಾತಿನ ಮೇಲೆ ನಿಗಾ ಇರಲಿ" ಎಂದು ಗರಂ ಆಗಿದ್ದಾರೆ.