ಮುಂಬೈ (ಮಹಾರಾಷ್ಟ್ರ) :ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರಿಗೂ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದರೂ ಅಚ್ಚರಿಯಿಲ್ಲ. ಅಲ್ಲದೇ, ಅವರ ಸ್ಮಾರಕದ ಮೇಲೂ ನೋಟಿಸ್ ಅಂಟಿಸಬಹದು ಎಂದು ಶಿವಸೇನಾ ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಜವಾಹರಲಾಲ್ ನೆಹರು ಅವರಿಂದ ಸೃಷ್ಟಿಯಾಗಿದ್ದ ಆಸ್ತ್ರಯೇ ಹೊರತು, ಅದು ಆಸ್ತಿಯಲ್ಲ. ಈಗ ರಾಜಕೀಯದಲ್ಲಿರುವ ಇದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ತಾವು ಬರೆದ ಅಂಕಣದಲ್ಲಿ ಪ್ರಶ್ನಿಸಿದ್ದಾರೆ.
1937ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನೆಹರು ಆರಂಭಿಸಿದ್ದರು. ಆಗ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಸ್ವತಃ ನೆಹರು ಇದರ ಆಧಾರಸ್ತಂಭವಾಗಿದ್ದರು. ಈ ಪತ್ರಿಕೆಯ ನಿಖರ ವರದಿಗಾರಿಕೆಯಿಂದ ಬ್ರಿಟಿಷರು ಭಯ ಬಿದ್ದಿದ್ದರು ಹಾಗೂ 1942ರಿಂದ 1945ರವರೆಗೆ ನಿಷೇಧ ಹೇರಿದ್ದರು. ಈ ಪತ್ರಿಕೆಯನ್ನು ಹಣಕಾಸಿಗಾಗಿ ಆರಂಭಿಸಿದ್ದಲ್ಲ. ಆದರೆ, ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತಮ್ಮ ಅಂಕಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಪತ್ರಿಕೆಯ ನಷ್ಟಕ್ಕೆ ಸಿಲುಕಿದಾಗ ನೆಹರು ನಮ್ಮ 'ಆನಂದ ಭವನ' ನಿವಾಸ ಮಾರಾಟಕ್ಕೂ ಮುಂದಾಗಿದ್ದರು. ಈ ಬಗ್ಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭಿಸುವಾಗ ನೆಹರು ಜೊತೆಗಿದ್ದ ಪಿ.ಡಿ. ಟಂಡನ್ ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ಸಾಮ್ನಾ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಎರಡೂ ಆಸ್ತಿಗಳಲ್ಲ. ಇವು ನಮ್ಮ ವಿಚಾರಗಳು ಮತ್ತು ತತ್ವಗಳನ್ನು ಪಸರಿಸುತ್ತಿವೆ ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ:ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದು ಭಾರಿ ದುರಂತ.. 28 ಜನರಲ್ಲಿ 15 ಮಂದಿ ಶವ ಪತ್ತೆ