ಮುಂಬೈ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪುನಾವಾಲಾಗೆ ಮರಣದಂಡನೆ ವಿಧಿಸಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕೊಲೆಗಟುಕನೊಬ್ಬ ತನ್ನ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಕಳೆದ ಆರು ತಿಂಗಳಿನಿಂದ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಕೊನೆಗೂ ವಿಕೃತ ಪ್ರೇಮಿಯನ್ನು ಸೆರೆಹಿಡಿದಿದ್ದಾರೆ. ಇಂತಹ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು, ಇಂತಹ ಹೀನ ಕೃತ್ಯ ಮಾಡುವವರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಶ್ರದ್ಧಾ ಹತ್ಯಾಕಾಂಡಕ್ಕೆ ಮುಂಬೈ ನಂಟು: ಶ್ರದ್ಧಾ ವಿಲಾಸ್ ವಾಕರ್ ಎಂಬ ಯುವತಿ ವಾಶಿಯಲ್ಲಿರುವ ಸಂಸ್ಕೃತಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದಳು. ಆದರೆ, ಕುಟುಂಬಸ್ಥರು ಪ್ರಿಯಕರ ಅಫ್ತಾಬ್‌ನೊಂದಿಗಿನ ಮದುವೆ ವಿರೋಧಿಸಿದ್ದರಿಂದ ಮನೆಯವರಿಂದ ದೂರವಾಗಿ ಪ್ರೇಮಿಯೊಂದಿಗೆ ವಾಲಿ ನಂತರ ವಾಶಿಯಲ್ಲಿ ವಾಸಿಸುತ್ತಿದ್ದಳು.
ಶ್ರದ್ಧಾ ಅವರ ತಾಯಿ ಜನವರಿ 2020 ರಲ್ಲಿ ನಿಧನರಾಗಿದ್ದರು. ಆ ಸಮಯದಲ್ಲಿ ಹದಿನೈದು ದಿನಗಳ ಕಾಲ ಕುಟುಂಬಸ್ಥರ ಜೊತೆ ಉಳಿಯಲು ಬಂದಿದ್ದು, ನಂತರ ಮತ್ತೆ ಅಫ್ತಾಬ್ ಜೊತೆ ವಾಸಿಸಲು ಪ್ರಾರಂಭಿಸಿದ್ದಾಳೆ. ಇದೇ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾರ್ಚ್ 2022 ರಲ್ಲಿ, ಅಫ್ತಾಫ್ ಮತ್ತು ಶ್ರದ್ಧಾ ಇಬ್ಬರೂ ದೆಹಲಿಗೆ ತೆರಳಿದ್ದಾರೆ. ಇದಾದ ನಂತರ ಶ್ರದ್ಧಾ ಮುಂಬೈನ ವಸಾಯಿಯ ಸ್ನೇಹಿತರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದಳು. ಆದರೆ, ಆಗಸ್ಟ್‌ನಲ್ಲಿ ಶ್ರದ್ಧಾಳ ಸ್ನೇಹಿತರೊಬ್ಬರು ಆಕೆಗೆ ಮೆಸೇಜ್ ಮಾಡಿದ ನಂತರ ಯಾವುದೇ ಉತ್ತರ ಬಾರದ ಕಾರಣ ಸಹೋದರ ಶ್ರೇಯಸ್‌ಗೆ ಮಾಹಿತಿ ನೀಡಿದ್ದಾರೆ.