ಮುಂಬೈ: ಆರೋಗದ ಬಗ್ಗೆ ವಿಚಾರಿಸಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ, ಶಿವಸೇನೆ ಸಂಸದ ಸಂಜಯ್ ರಾವುತ್ ಟ್ವೀಟ್ ಮುಖಾಂತರ ಧನ್ಯವಾದ ಹೇಳಿದ್ದಾರೆ.
ಕೆಲವು ವಿಷಯಗಳ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ರಾಜಕೀಯ ಸಹೋದ್ಯೋಗಿಯನ್ನು ವಿಚಾರಿಸುವುದು ಮಾನವೀಯತೆಯ ಸಂಕೇತವಾಗಿದೆ. ಭಾರತ್ ಜೋಡೋ ಯಾತ್ರೆಯ ತಮ್ಮ ಬಿಡುವಿಲ್ಲದ ಸಮಯದಲ್ಲೂ, ರಾಹುಲ್ ಗಾಂಧಿ ಭಾನುವಾರ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ನಾವು ನಿಮಗಾಗಿ ಚಿಂತಿಸಿದ್ದೇವೆ ಎಂದರು. ಅವರ ಪರಾನುಭೂತಿಯನ್ನು ನಾನು ಪ್ರಶಂಸಿಸುತ್ತೇನೆ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.
ರಾಜಕೀಯ ಕಹಿ ಸಮಯದಲ್ಲಿ, ಇಂತಹ ಸಂಬಂಧಗಳು ಅಪರೂಪವಾಗುತ್ತಿವೆ. ರಾಹುಲ್‌ಜೀ ಅವರು ತಮ್ಮ ಯಾತ್ರೆಯಲ್ಲಿ ಪ್ರೀತಿ ಮತ್ತು ಸಹಾನುಭೂತಿಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿದ್ದಾರೆ. ಆದ್ದರಿಂದ, ಭಾರಿ ಪ್ರಶಂಸೆ ಪಡೆಯುತ್ತಿದ್ದಾರೆ ಎಂದು ರಾವುತ್ ಹೇಳಿದರು.
ದೂರವಾಣಿ ಕರೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, "ನಾನು ಭಾನುವಾರ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ನನ್ನ ಆರೋಗ್ಯವನ್ನು ವಿಚಾರಿಸಿದ್ದಾರೆ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ನಾನು ಜೈಲಿನಲ್ಲಿದ್ದಾಗ, ಗಾಂಧಿ, ಠಾಕ್ರೆ ಮತ್ತು ಪವಾರ್ ಕುಟುಂಬದವರು ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು ಎಂದು ನೆನಪು ಮಾಡಿಕೊಂಡರು.
ಏಕಾಂತ ವಾಸದಲ್ಲಿದ್ದೆ: ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ 110 ದಿನಗಳ ಕಾಲ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿದ ರಾಜಕೀಯ ಸಹೋದ್ಯೋಗಿಯ ಬಗ್ಗೆ ದುಃಖಿಸುವುದು ಮಾನವೀಯವಾಗಿದೆ. ಜಾರಿ ನಿರ್ದೇಶನಾಲಯದ ಕಸ್ಟಡಿಯಿಂದ ಬಿಡುಗಡೆಯಾದ ನಂತರ, ರಾವುತ್ ಅವರು ಸಾವರ್ಕರ್ ಅವರ ಏಕಾಂತ ಸೆರೆವಾಸಕ್ಕೆ ಸಮಾನಾಂತರವಾಗಿ ಚಿತ್ರಿಸಿದ್ದರು. "ಸಾವರ್ಕರ್ ಮತ್ತು ತಿಲಕ್ ಅವರಂತೆ ನಾನು ಏಕಾಂತ ಸೆರೆಯಲ್ಲಿದ್ದೆ" ಎಂದು ಹೇಳಿದ್ದರು.
ಕಳೆದ ವಾರ, ತಮ್ಮ ಭಾರತ್ ಜೋಡೋ ಯಾತ್ರೆಯ ನಿಮಿತ್ತ ಮಹಾರಾಷ್ಟ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನ ಚಿಹ್ನೆ ಎಂದು ಕರೆದಿದ್ದರು. ಸಾವರ್ಕರ್ ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿದ್ದರು. ಭಯದಿಂದ ಕ್ಷಮಾದಾನ ಅರ್ಜಿಯನ್ನು ಬರೆದಿದ್ದರು ಎಂದು ರಾಹುಲ್ ಗಾಂಧಿ, ಸಾವರ್ಕರ್ ಅವರು ಬರೆದ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದರು.
ಇದನ್ನೂ ಓದಿ:ರಾಜ್ಯಪಾಲರನ್ನು ರಾಜ್ಯದಿಂದ ಹೊರ ಕಳುಹಿಸಿ: ಶಿವಾಜಿ ವಿವಾದದ ಬೆನ್ನಲ್ಲೇ ಬಿಜೆಪಿಗೆ ಶಿಂಧೆ ಬಣದ ನಾಯಕರ ಒತ್ತಾಯ