ಮುಂಬೈ: ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಇರುವ ಪ್ರಸಿದ್ಧ ಕರಾಚಿ ಸ್ವೀಟ್ಸ್ ಹೆಸರನ್ನು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ಒತ್ತಾಯಕ್ಕೆ ವಿರುದ್ಧವಾಗಿ ಇದೇ ಪಕ್ಷದ ಮುಖಂಡ ರಾವತ್ ಹೇಳಿಕೆ ನೀಡಿದ್ದಾರೆ.
ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್ ಮುಂಬೈನಲ್ಲಿ 60 ವರ್ಷಗಳಿಂದ ಇದ್ದು, ಅವರಿಗೆ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಕರಾಚಿ ಬೇಕರಿ ಹೆಸರನ್ನು ಬದಲಾಯಿಸುವ ಬೇಡಿಕೆಗೆ ಯಾವುದೇ ಅರ್ಥವಿಲ್ಲ ಮತ್ತು ಪಕ್ಷದ ಅಧಿಕೃತ ನಿಲುವು ಅಲ್ಲ ಎಂದರು.
ಸೇನಾ ನಾಯಕ ನಿತಿನ್ ನಂದಗಾಂವ್ಕರ್ ಅವರು ಬಾಂದ್ರಾಲ್ಲಿರುವ ಕರಾಚಿ ಸ್ವೀಟ್ಸ್ ಮಾಲೀಕರನ್ನು ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಬಳಿಕ ಸಂಜಯ್ ರಾವತ್ ಸ್ಪಷ್ಟೀಕರಣ ನೀಡಿದ್ದಾರೆ.
ವಿಡಿಯೋದಲ್ಲಿ ನಿತಿನ್ ನಂದಗಾಂವ್ಕರ್, ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕರಾಚಿಯ ಹೆಸರನ್ನು ಇನ್ನು ಮುಂದೆ ಬಳಸುವುದಿಲ್ಲ. ಕರಾಚಿಯು ಪ್ರಸಿದ್ಧ ಭಯೋತ್ಪಾದಕರ ನೆಲೆಯಾಗಿದೆ. ನೀವು ಮುಂಬೈನಲ್ಲಿ ವಾಸಿಸುತ್ತಿದ್ದರೆ ಮುಂಬೈ ಬಗ್ಗೆ ಹೆಮ್ಮೆ ಪಡಬೇಕು. ಪಾಕಿಸ್ತಾನ, ಕರಾಚಿಯ ನೆನಪುಗಳು ಮುಂಬೈನಲ್ಲಿ ಉಳಿಯುವುದಿಲ್ಲ. ಕರಾಚಿ ಬೇಕರಿ, ಕರಾಚಿ ಸ್ವೀಟ್ಸ್, ಕರಾಚಿ ಶಾಲೆಗಳು ಮುಂಬೈನಲ್ಲಿ ನಡೆಯುವುದಿಲ್ಲ. ಕರಾಚಿಯ ಹೆಸರನ್ನು 15 ದಿನಗಳಲ್ಲಿ ಬದಲಾಯಿಸಿ ಎಂದಿದ್ದರು.